Pro Kabaddi Final: ಕನ್ನಡಿಗ ಕೋಚ್ ಮಾರ್ಗದರ್ಶನದಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಪುಣೇರಿ ಪಲ್ಟಾನ್!
ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ಅಂತ್ಯಂತ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ 28-25 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿದ ಪುಣೇರಿ ಪಲ್ಟಾನ್ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.
ಕನ್ನಡಿಗ ಕೋಚ್ ಬಿ.ಸಿ.ರಮೇಶ್ ಮಾರ್ಗದರ್ಶನದಲ್ಲಿ ಪುಣೇರಿ ತಂಡವು ಈ ಲೀಗ್‌ನ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿತ್ತು. ಆಡಿದ 22 ಪಂದ್ಯಗಳ ಪೈಕಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು.
ಕಳೆದ ಬಾರಿಯೂ ಪುಣೇರಿ ತಂಡವು ಫೈನಲ್ ಆಡಿತ್ತು. ಆದರೆ ಜೈಪುರ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಕನ್ನಡಿಗ ಕೋಚ್ ಬಿ.ಸಿ.ರಮೇಶ್ ಅವರ ಮಾರ್ಗದರ್ಶನದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.
ಇನ್ನು ಚಾಂಪಿಯನ್ ಆದ ಪುಣೇರಿ ತಂಡವು ಪ್ರಶಸ್ತಿ ಮೊತ್ತವಾಗಿ 3 ಕೋಟಿ ರೂ. ಬಹುಮಾನ ಗೆದ್ದರೆ, ರನ್ನರ್ ಅಪ್ ಹರಿಯಾಣ ತಂಡಕ್ಕೆ 1.8 ಕೋಟಿ ರೂ. ಬಹುಮಾನ ದೊರೆದಿದೆ.