ರಾಜ್ಯದ ಈ ಭಾಗಗಳಲ್ಲಿ ಅಬ್ಬರಿಸಲಿದ್ದಾನೆ ವರುಣ !ಮೂರು ದಿನಗಳವರೆಗೆ ಎಡೆಬಿಡದೆ ಸುರಿಯಲಿದೆ ಮಳೆ ! ನೀಗುವುದೇ ಬೆಂಗಳೂರಿನ ನೀರಿನ ಬವಣೆ !
ಬಿಸಿಲಿನಿಂದ ಬೆಂದು ಹೋಗಿರುವ ರಾಜ್ಯದ ಜನ ಮಳೆ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 22ರಿಂದ ಅಂದರೆ ಮುಂದಿನ ಶುಕ್ರವಾರದಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ವಾರವೂ ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಟ್ಟಿನಲ್ಲಿ ಬಿಸಿಲಿನಿಂದ ತತ್ತರಿಸಿರುವ ರಾಜ್ಯದ ಜನತೆಗೆ ಈ ಸುದ್ದಿ ಸಂತೋಷ ತಂದಿದೆ.
ಇಲಾಖೆಯ ಮುನ್ಸೂಚನೆಯ ಪ್ರಕಾರ ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ತುಮಕೂರಿನಲ್ಲಿ ಮಳೆಯಾಗಲಿದೆ. ಇನ್ನು ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ದಕ್ಷಿಣ ಕನ್ನಡದ ಸುಳ್ಯದಲ್ಲಿ ಮಳೆಯಾಗಲಿದೆ.
ಇನ್ನು ಕೊಡಗಿನಲ್ಲಿ ನಿನ್ನೆಯಿಂದಲೇ ವರುಣ ಕೃಪೆ ತೋರಿದ್ದಾನೆ. ಕೊಡಗಿನ ನಾಪೋಕ್ಲು, ಬೊಳ್ಳುಮಾಡುವಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯ ಸಿಂಚನವಾಗಿದೆ.
ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಶುಕ್ರವಾರದಿಂದ ಮಳೆಯಾದರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವುದೇ ಎಂದು ಜನ ಎದುರು ನೋಡುತ್ತಿದ್ದಾರೆ.