Rajasthan Assembly Elections: ರಾಜಸ್ಥಾನದ ಮುಂದಿನ ಸಿಎಂ ಎಂದು ಬಿಂಬಿಸಲಾಗುತ್ತಿರುವ ಆ `ರಾಜಕುಮಾರಿ` ಯಾರ್ ಗೊತ್ತಾ?

Mon, 04 Dec 2023-7:37 am,

ಜೈಪುರ ರಾಜಮನೆತನದ ರಾಜಕುಮಾರಿಯಾದ ದಿಯಾ ಕುಮಾರಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯಾಧರ್ ನಗರ ಕ್ಷೇತ್ರದಿಂದ 71,368 ಮತಗಳಿಂದ ಗೆದ್ದಿದ್ದಾರೆ. ಈ ಮೊದಲು ಅವರು ಬಿಜೆಪಿ ಸಂಸದರಾಗಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಕಂಡಿದೆ. ಈ ಬಳಿಕ  'ರಾಜಕುಮಾರಿ' ದಿಯಾ ಕುಮಾರಿ ರಾಜ್ಯದ ಸಿಎಂ  ಆಗಲಿದ್ದಾರೆ ಎಂಬ ಮಾತು ಸಾಕಷ್ಟು ಕೇಳಿ ಬರುತ್ತಿದೆ. ಅಷ್ಟಕ್ಕೂ ಈಕೆ ಯಾರು ಗೊತ್ತಾ? 

ದಿಯಾ ಕುಮಾರಿ ಬ್ರಿಟೀಷ್ ಆಳ್ವಿಕೆಯ ಅವಧಿಯಲ್ಲಿ ಜೈಪುರದ ರಾಜಪ್ರಭುತ್ವದ ಕೊನೆಯ ಮಹಾರಾಜನಾಗಿದ್ದ ಮಾನ್ ಸಿಂಗ್ II ರ ಮೊಮ್ಮಗಳು. ಅವರ ತಂದೆ ಭವಾನಿ ಸಿಂಗ್ ಹಿರಿಯ ಸೇನಾ ಅಧಿಕಾರಿ ಮತ್ತು ಹೋಟೆಲ್ ಉದ್ಯಮಿ. ಇವರ ತಾಯಿಯ ಹೆಸರು ಪದ್ಮಿನಿ ದೇವಿ. 

30 ಜನವರಿ 1971 ರಂದು ಜನಿಸಿದ ದಿಯಾ ಕುಮಾರಿ ಅವರ ತಂದೆ-ತಾಯಿಯ ಏಕೈಕ ಪುತ್ರಿ. ಈಕೆಯ ಹೆಸರಿನಲ್ಲಿ ಜೈಪುರದ ಸಿಟಿ ಪ್ಯಾಲೇಸ್ ಸೇರಿದಂತೆ ಸಾಕಷ್ಟು ಆಸ್ತಿ, ವ್ಯವಹಾರಗಳು, ಟ್ರಸ್ಟ್‌ಗಳು ಮತ್ತು ಶಾಲೆಗಳನ್ನು ಹೊಂದಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯ ಒಡತಿ ಆಗಿದ್ದಾರೆ. 

ಜೈಪುರ, ದೆಹಲಿ ಮತ್ತು ಮುಂಬೈನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣ ಪೂರ್ಣಗೊಳಿಸಿರುವ ರಾಜಕುಮಾರಿ ದಿಯಾ ಕುಮಾರಿ ಲಂಡನ್‌ನಿಂದ ಅಲಂಕಾರಿಕ ಚಿತ್ರಕಲೆಯಲ್ಲಿ ಡಿಪ್ಲೊಮಾ ಕೂಡ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಸಮಾಜ ಸೇವೆಗಾಗಿ ಅನೇಕ ಎನ್‌ಜಿಒಗಳನ್ನು ಸಹ ನಡೆಸುತ್ತಿದ್ದಾರೆ.

ರಾಜಕುಮಾರಿ ದಿಯಾ ಕುಮಾರಿ ಚಿಕ್ಕವರಾಗಿದ್ದಾಗಿನಿಂದಲೂ ರಾಜಕೀಯವನ್ನು ತುಂಬಾ ಹತ್ತಿರದಿಂದ ಕಂಡಿದ್ದಾರೆ. ದಿಯಾ ಕುಮಾರಿಯವರ  ಮಲತಾಯಿ ಮತ್ತು ಜೈಪುರದ ಮಾಜಿ ಮಹಾರಾಣಿ, ಗಾಯತ್ರಿ ದೇವಿ ಅವರು ಜೈಪುರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರ ತಂದೆ ಭವಾನಿ ಸಿಂಗ್ ಕೂಡ ಜೈಪುರದಿಂದ ಚುನಾವಣೆಗೆ ಸ್ಪರ್ಧಿಸಿದ್ದರೂ ಸಹ ಪರಾಜಯ ಕಂಡಿದ್ದರು. 

ರಾಜಮನೆತನದ ಹೊರಗಿನವರಾಗಿದ್ದ  ಮತ್ತು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ನರೇಂದ್ರ ಸಿಂಗ್ ಎಂಬುವವರನ್ನು ವಿವಾಹವಾಗಿದ್ದ ರಾಜಕುಮಾರಿ ದಿಯಾ ಕುಮಾರಿ 2018 ರಲ್ಲಿ ತಮ್ಮ ವಿವಾಹ ಬಂಧನದಿಂದ ವಿಚ್ಛೇದನ ಪಡೆದಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು ಅವರ ಹೆಸರು ಪದ್ಮನಾಭ್ ಸಿಂಗ್, ಲಕ್ಷ್ಯರಾಜ್ ಪ್ರಕಾಶ್ ಸಿಂಗ್ ಮತ್ತು ಗೌರವಿ ಕುಮಾರಿ.

2013 ರಲ್ಲಿ, ಜೈಪುರದಲ್ಲಿ ಬಿಜೆಪಿ ರ್ಯಾಲಿಯ ಸಂದರ್ಭದಲ್ಲಿ ಪಕ್ಷದ ಅಂದಿನ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಗುಜರಾತ್ ಸಿಎಂ ನರೇಂದ್ರ ಮೋದಿ ಮತ್ತು ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಅವರ ಉಪಸ್ಥಿತಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರ ಸಮ್ಮುಖದಲ್ಲಿ ರಾಜಕುಮಾರಿ ದಿಯಾ ಕುಮಾರಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. 

ಅದೇ ವರ್ಷ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸವಾಯಿ ಮಾಧೋಪುರ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ರಾಜಕುಮಾರಿ ದಿಯಾ ಕುಮಾರಿ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದರು. ಆದಾಗ್ಯೂ, ಅದರ ಮುಂದಿನ ಚುನಾವಣೆಯಲ್ಲಿ 2018ರಲ್ಲಿ ಅವರು ಸ್ಪರ್ಧಿಸಿರಲಿಲ್ಲ.   

ಬಳಿಕ ಬಿಜೆಪಿ 2019ರಲ್ಲಿ ರಾಜಕುಮಾರಿ ದಿಯಾ ಕುಮಾರಿಯವರಿಗೆ ರಾಜ್‌ಸಮಂದ್ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಟಿಕೆಟ್ ನೀಡಿತು. ಈ ಚುನಾವಳೆಯಲ್ಲಿ ಅವರು 8.58 ಲಕ್ಷ ಮತಗಳನ್ನು ಪಡೆದು 5.51 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದರು. 

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಶೇಷ ಕಾರ್ಯತಂತ್ರದ ಅಡಿಯಲ್ಲಿ, ಪಕ್ಷವು ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಜೈಪುರದ ವಿದ್ಯಾನಗರ ಕ್ಷೇತ್ರದಿಂದ ಕಣಕ್ಕಿಳಿಸಿತು. ಇದರಲ್ಲಿ ಅವರು 71,368 ಮತಗಳಿಂದ ಗೆದ್ದಿದ್ದಾರೆ. ಅಷ್ಟೇ ಅಲ್ಲ, ದಿಯಾ ಕುಮಾರಿಯವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂತಲೂ ಹೇಳಲಾಗುತ್ತಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link