RR ಬ್ಯಾಟರ್ ರಿಯಾನ್ ಪರಾಗ್ ತಂದೆ ಯಾರು ಗೊತ್ತಾ? ಇವರೂ ಸಹ ಸ್ಟಾರ್ ಕ್ರಿಕೆಟರ್, ಧೋನಿಯ ನೆಚ್ಚಿನ ಆಟಗಾರ
ಐಪಿಎಲ್ 2024ರ 9 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸುವಲ್ಲಿ ರಿಯಾನ್ ಪರಾಗ್ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕವೂ ಆಡಿರುವ ಪಂದ್ಯಗಳಲ್ಲಿ ರಿಯಾನ್ ಪರಾಗ್ ಅದ್ಭುತವಾಗಿ ಬ್ಯಾಟ್ ಬೀಸಿದ್ದರು.
ರಿಯಾನ್ ಪರಾಗ್ ಅವರ ತಂದೆ ತಾಯಿ ಇಬ್ಬರೂ ಕ್ರೀಡಾ ಹಿನ್ನೆಲೆ ಹೊಂದಿರುವವರೇ. ತಂದೆ ಕ್ರಿಕೆಟಿಗರಾಗಿದ್ದರೆ, ತಾಯಿ ಅಂತರರಾಷ್ಟ್ರೀಯ ಈಜುಗಾರ್ತಿ.
ರಿಯಾನ್ ಪರಾಗ್ ಅವರ ತಂದೆಯ ಹೆಸರು ಪರಾಗ್ ದಾಸ್. ಇವರು ಮಹೇಂದ್ರ ಸಿಂಗ್ ಧೋನಿ ಜೊತೆ ಕ್ರಿಕೆಟ್ ಆಡಿದ್ದರು. ಅಂದಹಾಗೆ ಪರಾಗ್ ದಾಸ್ ದೀರ್ಘಕಾಲ ಅಸ್ಸಾಂ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಇದಲ್ಲದೇ ರೈಲ್ವೇಸ್ ಪರ ಆಡಿದ್ದರು. ರಯಾನ್ ತಂದೆ ಮತ್ತು ಎಂಎಸ್ ಧೋನಿ ಖರಗ್‌ಪುರ ಮತ್ತು ಗುವಾಹಟಿಯಲ್ಲಿ ನಡೆದ ರೈಲ್ವೇ ಟೂರ್ನಮೆಂಟ್’ನಲ್ಲಿ ಒಟ್ಟಿಗೆ ಭಾಗವಹಿಸಿದ್ದರು.
ಈಗ ಅವರ ಮಗ ಐಪಿಎಲ್’ನಲ್ಲಿ ಧೋನಿ ವಿರುದ್ಧ ಆಡುತ್ತಿದ್ದಾರೆ. ರಿಯಾನ್ ತಂದೆ ಅವರ ವೃತ್ತಿಜೀವನದಲ್ಲಿ 43 ಪ್ರಥಮ ದರ್ಜೆ ಮತ್ತು 32 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಅವರ ತಾಯಿ ಮಿಥು ಬರುವಾ ದಾಸ್ ಅಂತರಾಷ್ಟ್ರೀಯ ಭಾರತೀಯ ಈಜುಗಾರ್ತಿ. ತಂದೆ-ತಾಯಿಯ ಈ ಉತ್ಸಾಹವೇ ರಿಯಾನ್ ಕೂಡ ಕ್ರೀಡೆಯತ್ತ ಒಲವು ಬೆಳೆಸಲು ಕಾರಣವಾಯಿತು.
ರಿಯಾನ್ ಪರಾಗ್ ನವೆಂಬರ್ 10, 2001 ರಂದು ಅಸ್ಸಾಂನ ಗುವಾಹಟಿಯಲ್ಲಿ ಜನಿಸಿದರು. ಅಸ್ಸಾಂ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುವುದಲ್ಲದೆ, ರಿಯಾನ್ ಭಾರತದ ಅಂಡರ್ 19 ತಂಡದ ಭಾಗವಾಗಿದ್ದಾರೆ. 2016-17ರಲ್ಲಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದಾಗ ರಿಯಾನ್ ಮನ್ನಣೆ ಗಳಿಸಿದರು. ಈ ಟ್ರೋಫಿಯಲ್ಲಿ 14 ಇನ್ನಿಂಗ್ಸ್’ಗಳಲ್ಲಿ 642 ರನ್ ಗಳಿಸಿದ್ದರು.
2019ರ ಸೀಸನ್’ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ರಿಯಾನ್ ಐಪಿಎಲ್ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ 56 ಪಂದ್ಯಗಳನ್ನು ಆಡಿದ್ದು, 46 ಇನ್ನಿಂಗ್ಸ್’ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.