ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ್ರೆ ನಟ ದರ್ಶನ್’ಗೆ ಸಿಗುತ್ತೆ ಈ ಕಠಿಣ ಶಿಕ್ಷೆ!!
ಸದ್ಯ ನಟ ದರ್ಶನ್ ಸೇರಿದಂತೆ 18 ಮಂದಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂಬ ಕೋಪದಿಂದ ದರ್ಶನ್ ಮತ್ತು ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಬಳಿಕವೇ ಸ್ಪಷ್ಟತೆ ದೊರಕಲಿದೆ.
ಆದರೆ ಒಂದು ವೇಳೆ, ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗಿದ್ದು, ಅವರು ಅಪರಾಧಿ ಎಂದು ಸಾಬೀತಾದರೆ ಯಾವ ರೀತಿಯ ಶಿಕ್ಷೆಗೆ ಗುರಿಯಾಗುತ್ತಾರೆ ಎಂಬ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಮಾಹಿತಿ ನೀಡಿದ್ದಾರೆ.
“ಪೊಲೀಸರು ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯನ್ನು ಹೇಗೆ ಬೇಕೋ ಹಾಗೇ ತಿರುಚಬಹುದಿತ್ತು. ಆದರೆ ನನ್ನ ಪ್ರಕಾರ ಈ ಪ್ರಕರಣದ ವಿಷಯದಲ್ಲಿ ಒಳ್ಳೆಯ ರೀತಿಯಲ್ಲಿ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
“ಬಹುತೇಕ ಸಂದರ್ಭಗಳಲ್ಲಿ, ಕೊಲೆ ಮಾಡಿದವರೂ ಯಾರು ಸಹ ತಪ್ಪು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಆ ಸ್ಥಳದಲ್ಲಿ ಇದ್ದೆ ಎಂದಷ್ಟೇ ಹೇಳುತ್ತಾರೆ” ಎಂದಿದ್ದಾರೆ.
ಇನ್ನು ಶಿಕ್ಷೆಯ ವಿಷಯಕ್ಕೆ ಬಂದರೆ, “ಕೇಸ್’ನ ಸಾಂದ್ರತೆಯ ಅನುಸಾರ ಶಿಕ್ಷೆಯಾಗುತ್ತೆ. A1, A2, A3 ಹೀಗೆ ಎಷ್ಟು ಆರೋಪಿಗಳಿರುತ್ತಾರೋ ಅವರೆಲ್ಲರಿಗೂ ಸಮಾನವಾಗಿ ಶಿಕ್ಷೆಯಾಗುತ್ತದೆ. ಕೊಲೆ ಮಾಡಿದವರಿಗೆ ಒಂದು ರೀತಿಯ ಶಿಕ್ಷೆ, ಕಿಡ್ನಾಪ್ ಮಾಡಿದವರಿಗೆ ಒಂದು, ಶವ ಎಸೆದವರಿಗೆ ಒಂದು ರೀತಿ,.. ಹೀಗೆ ಆಯಾ ಅಪರಾಧಕ್ಕೆ ತಕ್ಕಂತೆ ಶಿಕ್ಷೆಯಾಗುತ್ತೆ. A1 ಗಿಂತ A2ಗೆ ಶಿಕ್ಷೆ ಕಡಿಮೆ ಎಂದೆಲ್ಲಾ ಭಾವಿಸುವಂತಿಲ್ಲ” ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ.
“ಮೊದಲು ಮ್ಯಾಜಿಸ್ಟ್ರೇಟ್ ಕೋರ್ಟ್’ನಲ್ಲಿ ತನಿಖೆ ನಡೆದು ಆ ಬಳಿಕ ಸೆಷನ್ಸ್ ಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತೆ. ಇನ್ನು ಇಂತಹ ಪ್ರಕರಣಗಳಲ್ಲಿ ಆರೋಪಿಯ ಪಾತ್ರ ಏನು ಎಂಬುದರ ಮೇಲೆ ಜಾಮೀನು ಮಂಜೂರು ನಿರ್ಧಾರವಾಗುತ್ತೆ. ಸಾಮಾನ್ಯನಾಗಿರಲಿ, ಸೆಲೆಬ್ರಿಟಿಯಾಗಿರಲಿ ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಜಾಮೀನು ಸಿಗಲ್ಲ” ಎಂದಿದ್ದಾರೆ.
“ಒಂದು ವೇಳೆ ಕೊಲೆ ಮಾಡಿರೋದು ಸಾಬೀತಾದರೆ 14 ವರ್ಷ ಜೈಲುಶಿಕ್ಷೆ, ಇಲ್ಲವೇ ಮರಣದಂಡನೆಯಿಂದ ಜೀವಾವಧಿವರೆಗೆ ಶಿಕ್ಷೆಯಾಗುತ್ತದೆ” ಎಂದು ಬಿಕೆ ಶಿವರಾಮ್ ತಿಳಿಸಿದ್ದಾರೆ.