ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋದು ವಿರಾಟ್ ಅಂದ್ಕೊಂಡ್ರಾ? ಅಲ್ಲ... ರೋಹಿತ್, ಕೊಹ್ಲಿ ಇಬ್ಬರನ್ನೂ ಹಿಂದಿಕ್ಕಿ 30 ಕೋಟಿ ಸಂಬಳ ಪಡೀತಾನೆ ಈ ಕ್ರಿಕೆಟಿಗ
ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರು ಐಪಿಎಲ್ 2025 ರ ಹರಾಜಿನಲ್ಲಿ ದಾಖಲೆ ಮಟ್ಟದ ಬೆಲೆಗೆ ಬಿಕರಿಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದೆ.
ಈ ಬಳಿಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಪಂತ್.
ಮತ್ತೊಂದೆಡೆ ಶ್ರೇಯಸ್ ಅಯ್ಯರ್, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದು, ಬಿಸಿಸಿಐ ಒಪ್ಪಂದವನ್ನು ಹೊಂದಿಲ್ಲದಿದ್ದರೂ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ಎಲ್ ಎಸ್ ಜಿ ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ದುಬಾರಿ ಬೆಲೆಯ ಬಿಕರಿಯಾಗಿದೆ.
2023-24ರಲ್ಲಿ BCCI ಯ ವಾರ್ಷಿಕ ಆಟಗಾರರ ರಿಟೈನರ್‌ಶಿಪ್‌ನಲ್ಲಿ ಗ್ರೇಡ್ B ವರ್ಗದಲ್ಲಿರುವ ಪಂತ್ ವಾರ್ಷಿಕವಾಗಿ ರೂ. 3 ಕೋಟಿ ಸಂಭಾವನೆ ಪಡೆಯುತ್ತಾರೆ. ಒಟ್ಟಾರೆ ಇಂದು ಈ ಸ್ಟಾರ್ ಕ್ರಿಕೆಟಿಗನಿಗೆ ವಾರ್ಷಿಕವಾಗಿ ಒಟ್ಟು ರೂ. 30 ಕೋಟಿ ಸಂಭಾವನೆ ಬರುತ್ತದೆ.
ಕಾರು ಅಪಘಾತದ ಕಾರಣ ಡಿಸೆಂಬರ್ 2022 ರಿಂದ ಪಂತ್ ಅವರು ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಆ ಬಳಿಕ ಪ್ರಕಟಣೆಯ ಸಮಯದಲ್ಲಿ ಚೇತರಿಸಿಕೊಳ್ಳುತ್ತಿದ್ದರಿಂದ ಅವರನ್ನು ಗ್ರೇಡ್ ಬಿ ವರ್ಗಕ್ಕೆ ಇಳಿಸಲಾಗಿತ್ತು. ಅದಕ್ಕೂ ಮುನ್ನ ಗ್ರೇಡ್ A ವರ್ಗದ ಭಾಗವಾಗಿದ್ದ ಅವರು, ಮುಂದಿನ ಮಾರ್ಚ್‌ನಲ್ಲಿ BCCI ಹೊಸ ಒಪ್ಪಂದದ ಪಟ್ಟಿಯನ್ನು ಪ್ರಕಟಿಸುವಾಗ ಅದೇ ವರ್ಗಕ್ಕೆ ಅಥವಾ A+ ಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ.