`ನನ್ನ ಜೀವ ಇರೋವರ್ಗೂ ತಂಬಾಕು ಜಾಹೀರಾತು ಪ್ರಚಾರ ಮಾಡಲ್ಲ`- ಹೀಗಂತ ಈ ವ್ಯಕ್ತಿಗೆ ಪ್ರಾಮಿಸ್ ಮಾಡಿದ್ದಾರಂತೆ ಸಚಿನ್ ತೆಂಡೂಲ್ಕರ್
ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್, ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಅವರು ತಮ್ಮ ಸುದೀರ್ಘ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಂದೇ ಒಂದು ಬಾರಿಯೂ ಮದ್ಯ ಅಥವಾ ತಂಬಾಕು ಉತ್ಪನ್ನದ ಜಾಹೀರಾತು ಅಥವಾ ಪ್ರಚಾರವನ್ನು ಮಾಡಿಲ್ಲ. ಈ ಉತ್ಪನ್ನಗಳಿಗೆ ಸಂಬಂಧಿಸಿದ ಬ್ರ್ಯಾಂಡ್‌ಗಳ ಆಫರ್‌ನ್ನು ಸಚಿನ್ ಎಂದಿಗೂ ಸ್ವೀಕರಿಸಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ
"ನನ್ನ ವೃತ್ತಿಜೀವನದಲ್ಲಿ ಒಂದೆರಡು ವರ್ಷಗಳ ಪ್ರಾಯೋಜಕರಿಲ್ಲದೆ ಆಡುವ ಸಮಯ ಬಂದಿತ್ತು. ಅಂತಹ ಸಂದರ್ಭದಲ್ಲೂ ನಾನು ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳನ್ನು ತಯಾರಿಸುವ ಬ್ರ್ಯಾಂಡ್‌ಗಳ ಪ್ರಚಾರ ಮಾಡಿಲ್ಲ. ಅಂತಹ ಬ್ರ್ಯಾಂಡ್‌ಗಳನ್ನು ನಾನು ಎಂದಿಗೂ ಪ್ರಚಾರ ಮಾಡುವುದಿಲ್ಲ ಎಂದು ನನ್ನ ತಂದೆಗೆ ಮಾತು ನೀಡಿದ್ದೇನೆ. ನಾನು ನನ್ನ ತಂದೆಗೆ ನೀಡಿದ ಈ ಭರವಸೆಯನ್ನು ಎಂದಿಗೂ ಉಲ್ಲಂಘಿಸಲಿಲ್ಲ.. ಉಲ್ಲಂಘಿಸುವುದೂ ಇಲ್ಲ" ಎಂದು ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಾರೆ.
ಸಚಿನ್ ಅವರು ʼಆಜ್ ತಕ್ʼ ಸುದ್ದಿವಾಹಿನಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
"ನಾನು ಅಂತಹ ಬ್ರ್ಯಾಂಡ್‌ಗಳನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ ಎಂದು ನನ್ನ ತಂದೆಗೆ ಹಲವು ವರ್ಷಗಳ ಹಿಂದೆ ಮಾತು ನೀಡಿದ್ದೆ. ಅಂತಹ ಜಾಹೀರಾತುಗಳನ್ನು ಉತ್ತೇಜಿಸಿ, ನನ್ನನ್ನು ಆದರ್ಶ ಎಂದು ಪರಿಗಣಿಸುವ ಯುವ ಪೀಳಿಗೆ ಅವುಗಳ ಕಡೆಗೆ ಆಕರ್ಷಿತವಾಗುವಂತೆ ಮಾಡಲಾರೆ. ಅದಕ್ಕಾಗಿಯೇ ನಾನು ಯಾವಾಗಲೂ ಅಂತಹ ಬ್ರಾಂಡ್‌ಗಳಿಂದ ದೂರ ಉಳಿಯುತ್ತಿದ್ದೆ" ಎಂದಿದ್ದಾರೆ.
"ನನ್ನ ತಂದೆ ನನಗೆ ಹಲವು ವರ್ಷಗಳ ಹಿಂದೆ ಹೇಳಿದ್ದರು, ನೀನು ಮಾದರಿಯಾಗುವ ಹಾದಿಯಲ್ಲಿದ್ದಿ. ಜನರು ನಿನ್ನನ್ನು ಅನುಸರಿಸಲು ಬಯಸುತ್ತಾರೆ. ಆದ್ದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವಂತಹ ಕೆಲಸಗಳನ್ನು ಮಾಡಬೇಡ ಅಂತಾ".. ಹೀಗೆಂದು ಸಚಿನ್ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
"ನನ್ನ 24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ನಾನು ಸ್ಟಿಕ್ಕರ್ ಇಲ್ಲದೆ ಬ್ಯಾಟ್‌ನೊಂದಿಗೆ ಆಡುವ ಸಮಯವಿತ್ತು. ನಂತರ ನನಗೆ ಅಂತಹ ಕೆಲವು ಬ್ರಾಂಡ್‌ಗಳಿಂದ ಆಫರ್‌ಗಳು ಬಂದವು. ಆದರೆ ನಾನು ನನ್ನ ತಂದೆಗೆ ಕೊಟ್ಟ ಮಾತನ್ನು ಎಂದಿಗೂ ಮುರಿಯಲಿಲ್ಲ. ಅನೇಕ ಬ್ರ್ಯಾಂಡ್‌ಗಳು ಒಂದು ಅಥವಾ ಎರಡು ಸರಣಿಗಳಿಗೆ ಮಾತ್ರ ಒಪ್ಪಂದವನ್ನು ಮಾಡಿಕೊಳ್ಳಿ ಎಂದು ಹೇಳಿತ್ತು... ಆದರೆ ನಾನು ಅದನ್ನು ಎಂದಿಗೂ ಮಾಡಲಿಲ್ಲ" ಎಂದಿದ್ದಾರೆ.