`ಆತನಿಗೆ ಅವೆಲ್ಲವನ್ನು ನೀಡಿದ್ದು ನನ್ನ ಜೀವನದ ಬಹುದೊಡ್ಡ ವೇಸ್ಟ್...!` ನಾಗಚೈತನ್ಯ 2ನೇ ಮದುವೆಗೂ ಮುನ್ನ ಕಿಚ್ಚು ಹಚ್ಚಿದ ಸಮಂತಾ ಸ್ಟೇಟ್ಮೆಂಟ್
ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ಮಾಜಿ ಪತಿ ನಾಗ ಚೈತನ್ಯ ಅವರಿಗೆ ಮದುವೆಯ ಸಮಯದಲ್ಲಿ ನೀಡಿದ ದುಬಾರಿ ಉಡುಗೊರೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಟಾಡೆಲ್: ಹನಿ ಬನ್ನಿ ಪ್ರಚಾರ ಮಾಡುತ್ತಿದ್ದ ನಟಿ, ಸಹನಟ ವರುಣ್ ಧವನ್ ಅವರೊಂದಿಗೆ ಫನ್ನಿ ಮಾತುಕತೆ ನಡೆಸಿದ್ದರು.
ಈ ಸಂದರ್ಭದಲ್ಲಿ ವರುಣ್ ಪ್ರಶ್ನೆ ಕೇಳಿದ್ದು, "ನೀವು ಸಂಪೂರ್ಣವಾಗಿ ನಿಷ್ಪ್ರಯೋಜಕವಾದದ್ದಕ್ಕೆ ಖರ್ಚು ಮಾಡಿದ ಅತ್ಯಂತ ಹಾಸ್ಯಾಸ್ಪದ ಹಣ ಯಾವುದು?" ಎಂದಿದ್ದಾರೆ.
ಅದಕ್ಕೆ ಅರೆಕ್ಷಣವೂ ಯೋಚಿಸದ ಸಮಂತಾ "ನನ್ನ ಮಾಜಿ (ಎಕ್ಸ್)ಗೆ ನೀಡಿದ ದುಬಾರಿ ಉಡುಗೊರೆಗಳು" ಎಂದು ಉತ್ತರಿಸಿದ್ದಾರೆ. ಸಮಂತಾ ಉತ್ತರ ವರುಣ್‌ಗೆ ಆಶ್ಚರ್ಯವನ್ನುಂಟು ಮಾಡಿತ್ತು. "ಯಾವುದು ಎಷ್ಟು?" ಎಂದು ಮತ್ತೆ ಪ್ರಶ್ನಿಸಿದ್ದಾರೆ ವರುಣ್.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್ ಬಳಕೆದಾರರು ನಟಿಯ ಬೋಲ್ಡ್ ಹೇಳಿಕೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ , ಸಮಂತಾ ತನ್ನ ಮಾಜಿ ಪತಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಿರಬಹುದು ಎಂದು ಊಹಿಸಿದ್ದಾರೆ.
ಅಭಿಮಾನಿಯೊಬ್ಬ ಹೀಗೆ ಬರೆದುಕೊಂಡಿದ್ದಾರೆ; "ಸಮಂತಾ ಅವರು 2017 ರ ಸುಮಾರಿಗೆ ಮದುವೆಯಾದಾಗ ನಾಗ ಚೈತನ್ಯ ಅವರಿಗೆ ದುಬಾರಿ ಬೈಕನ್ನು ಉಡುಗೊರೆಯಾಗಿ ನೀಡಿದ್ದರು. ಈಗ ಅದು ಕಷ್ಟಪಟ್ಟು ದುಡಿದ ಹಣ ವ್ಯರ್ಥವಾಗಿದೆ" ಎಂದಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ ಅಕ್ಟೋಬರ್ 2017 ರಲ್ಲಿ ಮದುವೆಯಾಗಿದ್ದರು. ಅದಕ್ಕೂ ಮುನ್ನ ಹಲವಾರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಈ ಜೋಡಿ, 2021 ರ ಅಕ್ಟೋಬರ್‌ನಲ್ಲಿ ವಿಚ್ಛೇದನ ನೀಡಿದ್ದರು,
ಇದೀಗ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರನ್ನು 2ನೇ ಮದುವೆಯಾಗಲಿದ್ದಾರೆ. ಈ ಮದುವೆ ಘೋಷಣೆಯಾದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಸಮಂತಾ ಟಾಂಗ್ ನೀಡುತ್ತಲೇ ಬಂದಿದ್ದಾರೆ. ಇದೀಗ ಮತ್ತೆ ಈ ಹೇಳಿಕೆ ವೈರಲ್ ಆಗಿದೆ.