ಇಂದು ಟೆನಿಸ್ ಜಗತ್ತಿಗೆ ವಿದಾಯ ಹೇಳುತ್ತಿರುವ ಸಾನಿಯಾ ನಡೆದು ಬಂದ ದಾರಿ

Mon, 20 Feb 2023-12:42 pm,

ನವೆಂಬರ್  15, 1986 ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ ಮಿರ್ಜಾ  ಬಾಲ್ಯ ಕಳೆದಿದ್ದು ಹೈದರಾಬಾದ್‌ನಲ್ಲಿ. ಜನನದ ನಂತರ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಬೇಕಾಗಿತ್ತು. ಇಮ್ರಾನ್ ಮಿರ್ಜಾ ಕ್ರೀಡಾ ಪತ್ರಕರ್ತರಾಗಿದ್ದರು. ನಂತರ ಅವರು ಮುದ್ರಣ ಉದ್ಯಮವನ್ನು ಪ್ರಾರಂಭಿಸಿದರು. ಸಾನಿಯಾ ತಾಯಿ ನಸೀಮಾ ಮಿರ್ಜಾ ಕೂಡ ಮುದ್ರಣ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದರು.

ಸಾನಿಯಾ ಅವರ ಆರಂಭಿಕ ಶಿಕ್ಷಣವು ಖೇರಾತಾಬಾದ್‌ನ ನಾಸರ್ ಶಾಲೆಯಿಂದ ಆರಂಭವಾಯಿತು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಆರಿಸಿದ್ದು, ಹೈದರಾಬಾದ್‌ನ ಸೇಂಟ್ ಮೇರಿಸ್ ಕಾಲೇಜನ್ನು. ಸಾನಿಯಾ ಕೇವಲ 6 ವರ್ಷದವಳಿದ್ದಾಗ, ಆಕೆಯ ತಂದೆ ಸಾನಿಯಾರನ್ನು ಹೈದರಾಬಾದ್‌ನ ನಿಜಾಮ್ ಕ್ಲಬ್‌ಗೆ ದಾಖಲಿಸದ್ದರು. ಆರು ವರ್ಷದ ಹುಡುಗಿಗೆ ಟೆನಿಸ್ ಕಲಿಸಲು ಅಲ್ಲಿನ ಕೋಚ್ ನಿರಾಕರಿಸಿದರಾದರೂ  ಸಾನಿಯಾ ಮಿರ್ಜಾ ಅವರ ಟೆನಿಸ್ ಕೌಶಲ್ಯವನ್ನು ನೋಡಿ ತರಬೇತಿ ನೀಡಲು ಒಪ್ಪಿಕೊಂಡರು.

ಸಾನಿಯಾ ಚಿಕ್ಕ ವಯಸ್ಸಿನಲ್ಲೇ ಟೆನಿಸ್ ಅಭ್ಯಾಸವನ್ನು ಪ್ರಾರಂಭಿಸಿದರು. ಆಕೆಯ ಮೊದಲ ಗುರು ಟೆನಿಸ್ ಆಟಗಾರ ಮಹೇಶ್ ಭೂಪತಿ. ಅವರು ಸಾನಿಯಾಗೆ ಆರಂಭಿಕ ಟೆನಿಸ್ ಪಾಠ ಹೇಳಿಕೊಟ್ಟಿದ್ದಾರೆ. ನಂತರ, ಸಾನಿಯಾ ಸಿಕಂದರಾಬಾದ್‌ನ ಸೆನೆಟ್ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ನಂತರ ಅಮೆರಿಕದಲ್ಲಿ ಏಸ್ ಟೆನಿಸ್ ಅಕಾಡೆಮಿಗೆ ಸೇರಿದರು.

ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ಅವರ ಮದುವೆ  ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 2010 ರಲ್ಲಿ ವಿವಾಹವಾದರು. ಸದ್ಯ ಇಬ್ಬರಿಗೂ ಒಬ್ಬ ಮಗನಿದ್ದಾನೆ.

1999 ರಲ್ಲಿ ಜಕಾರ್ತಾದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸಾನಿಯಾ ಮಿರ್ಜಾ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯಾವಳಿಯನ್ನು ಆಡಿದರು. ನಂತರ 2003 ರಲ್ಲಿ ವಿಂಬಲ್ಡನ್ ಚಾಂಪಿಯನ್‌ಶಿಪ್ ಗರ್ಲ್ಸ್ ಡಬಲ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. 2003 ಯುಎಸ್ ಓಪನ್ ಬಾಲಕಿಯರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು. ಆಫ್ರೋ-ಏಷ್ಯನ್ ಕ್ರೀಡಾಕೂಟದಲ್ಲಿ ಸಾನಿಯಾ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2007 ರಲ್ಲಿ, ಸಾನಿಯಾ ನಾಲ್ಕು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದು, ಸಿಂಗಲ್ಸ್‌ನಲ್ಲಿ ವಿಶ್ವದ 27 ನೇ ಶ್ರೇಯಾಂಕವನ್ನು ಹೊಂದಿದ್ದರು. 2009 ರಲ್ಲಿ, ಸಾನಿಯಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಗೆದ್ದರು. ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದಲ್ಲಿ 6 ಗ್ರ್ಯಾನ್‌ಸ್ಲಾಮ್‌ಗಳನ್ನು ಸಾಧಿಸಿದ್ದಾರೆ.

ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಸಾನಿಯಾ.ಡಬಲ್ಸ್‌ನಲ್ಲಿ ವಿಶ್ವದ ಮೊದಲ ಶ್ರೇಯಾಂಕ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2005 ರಲ್ಲಿ WTA ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾನಿಯಾ ಅನೇಕ ಗೌರವಗಳನ್ನು ಪಡೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link