ಮುಖದಲ್ಲಿ ಪಿಗ್ಮೆಂಟೇಶನ್ ಸಮಸ್ಯೆಗೆ ಹೇಳಿ ಬೈ ಬೈ..! ಕ್ಯೂಟ್ ಫೇಸ್‌ಗೆ ಹೇಳಿ ಹಾಯ್ ಹಾಯ್..
ನಿಮ್ಮ ಮುಖ ಎಷ್ಟೇ ಸುಂದರವಾಗಿದ್ದರೂ ಈ ಬಂಗು ಅಥವಾ ಪಿಗ್ಮೆಂಟೇಶನ್ ಅನ್ನೋದು ಮುಖದ ಕಳೆಯನ್ನೇ ಹಾಳು ಮಾಡುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಸಾಮಾನ್ಯ ಪದಾರ್ಥಗಳನ್ನು ಬಳಸಿ ಇಂತಹ ಸಮಸ್ಯೆಗಳಿಗೆ ಸುಲಭ ಪರಿಹಾರ ಪಡೆಯಬಹುದು. ಈ ಫೋಟೋಗ್ಯಾಲರಿಯಲ್ಲಿ ಪಿಗ್ಮೆಂಟೇಶನ್ ಸಮಸ್ಯೆಗೆ ಕಾರಣಗಳೇನು? ಇದಕ್ಕೆ ಪರಿಹಾರಗಳೇನು ಎಂದು ತಿಳಿಯೋಣ...
ದೇಹದಲ್ಲಿ ಮೇಳನಿನ್ ಅಂಶ ಹೆಚ್ಚಾದಾಗ ಮತ್ತು ಕಬ್ಬಿಣದ ಅಂಶ ಕಡಿಮೆ ಆದಾಗ ಪಿಗ್ಮೆಂಟೇಶನ್ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಅನುವಂಶಿಯ ಕಾರಣದಿಂದ ಈ ಸಮಸ್ಯೆ ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಸೂರ್ಯನ ಕಿರಣಗಳಿಂದ ಪಿಗ್ಮೆಂಟೇಶನ್ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸಾಮಾನ್ಯವಾಗಿ ಕೆಲವರಿಗೆ ಕೆನ್ನೆ ಭಾಗ , ಕೆಲವರಿಗೆ ಮೂಗಿನ ಭಾಗದಲ್ಲಿ ಪಿಗ್ಮೆಂಟೇಶನ್ ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಪೂರ್ತಿ ಮುಖದ ತುಂಬಾ ಆಗಿರುತ್ತೆ. ಇದಕ್ಕೆಲ್ಲಾ ಬೆಸ್ಟ್ ಹಾಗೂ ಸಿಂಪಲ್ ಮನೆ ಮದ್ದು ಇಲ್ಲಿವೆ ನೋಡಿ...
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹಾಲಿನ ಬಳಕೆ ಮಾಡುತ್ತಾರೆ. ಇನ್ನೂ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಇರುವುದರಿಂದ ಇದು ಪಿಗ್ಮೆಂಟೇಶನ್ನ್ನು ಕಡಿಮೆ ಮಾಡಲು ತುಂಬಾನೆ ಸಹಕಾರಿಯಾಗಿದೆ. ಒಂದು ಪುಟ್ಟ ಬಟ್ಟಲಿಗೆ ಸ್ವಲ್ಪ ಹಾಲನ್ನು ಹಾಕಿಕೊಂಡು, ಹತ್ತಿಯ ಉಂಡೆಯನ್ನು ನೆನೆಸಿ. ದಿನಕ್ಕೆ 2 ಬಾರಿ ಹಾಲಿನಲ್ಲಿ ಮಿಂದ ಹತ್ತಿ ಉಂಡೆಯನ್ನು ಮುಖದ ಮೇಲಿನ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕಲೆಗಳ ಜೊತೆ ನಿಮ್ಮ ಮುಖ ಸಾಫ್ಟ್ ಮತ್ತು ಸ್ಮೂತ್ ಆಗಲು ಸಹಾಯ ಮಾಡುತ್ತದೆ.
ಅಲೋವೇರಾ ಮುಖದ ಸೌಂದರ್ಯವನ್ನು ಹೆಚ್ಚಿಸುವ ನೈಸರ್ಗಿಕ ಮದ್ದು ಅಂತಾನೆ ಹೇಳಬಹುದು. ಬಂಗಿನ ಸಮಸ್ಯೆ ಇರುವವರು ಈ ಅಲೋವೇರಾವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಯ ಸಮಸ್ಯೆ ದೂರವಾಗುತ್ತದೆ. ಅಧ್ಯಯನವೊಂದರ ಪ್ರಕಾರ, ಅಲೋವೇರಾ ಹೈಪರ್ ಪಿಗ್ಮೆಂಟೇಶನ್ಗೆ ಪರಿಣಾಮಕಾರಿ ಚಿಕಿತ್ಸೆ ಎಂದು ತಿಳಿದುಬಂದಿದೆ. ನಿತ್ಯ ರಾತ್ರಿ ಮಲಗುವ ಮುನ್ನ ಶುದ್ಧವಾದ ಅಲೋವೇರಾ ಜೆಲ್ನ್ನು ಕಲೆಗಳಿರುವ ಭಾಗಕ್ಕೆ ಹಚ್ಚಿ. ಬೆಳಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಅತ್ಯುತ್ತಮ ಫಲಿತಾಂಶ ಪಡೆಯಬಹುದು.
ಪರಂಗಿ ಹಣ್ಣಿನಲ್ಲಿ ಪ್ಯಾಪೇನ್ ಅಂಶವು ಯಥೇಚ್ಚವಾಗಿರುವುದರಿಂದ ಇದು ಪಿಗ್ಮೆಂಟೇಶನ್ ನಿವಾರಿಸಲು ಉತ್ತಮ ಹೋಮ್ ರೆಮಿಡಿಯಾಗಿದೆ. ತುರಿದ ಪಪ್ಪಾಯ ಹಣ್ಣಿನ ರಸವನ್ನು ಪ್ರತಿನಿತ್ಯ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಕಾಲ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಕಲೆರಹಿತ ಮುಖ ನಿಮ್ಮದಾಗುತ್ತದೆ.
ಆಲೂಗಡ್ಡೆಯಲ್ಲಿ ಕ್ಯಾಟೆಕೊಲೇಸ್ ಎನ್ನುವ ಅಂಶವಿದೆ. ಇದು ಮುಖವನ್ನು ಸ್ವಚ್ಛಂದಗೊಳಿಸುತ್ತದೆ. ಆಲೂಗಡ್ಡೆ ರಸವನ್ನು ಬಳಸುವುದರಿಂದ ಬಂಗು, ಕಪ್ಪು ಕಲೆಯಂತಹ ಹಲವು ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಆಲೂಗಡ್ಡೆಯ ರಸವನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಕಪ್ಪು ಕಲೆಗಳಿಂದ ಮುಕ್ತಿ ಪಡೆದು ಮುಖದ ಸೌಂದರ್ಯ ಹೆಚ್ಚುತ್ತದೆ.
ಈ ಮೇಲಿನ ಎಲ್ಲಾ ಸುಲಭವಾದ ಮನೆಮದ್ದುಗಳ ಬಳಕೆ ಮಾಡುವುದು ಎಷ್ಟು ಮುಖ್ಯವೋ, ಹಾಗೆಯೇ ರಾತ್ರಿ ಮಲಗುವ ಮುನ್ನ ಅಲೋವೇರಾ ಜೆಲ್ ಹಾಗೂ ವಿಟಮಿನ್ E ಕ್ಯಾಪ್ಸುಲ್ ಜೊತೆ ಮಿಕ್ಸ್ ಮಾಡಿ ಅಪ್ಲೈ ಮಾಡುವುದರಿಂದ ಕ್ಲೀಯರ್ ಸ್ಕಿನ್ ನಿಮ್ಮದಾಗಿಸಿಕೊಳ್ಳಬಹುದು.
ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.