SBI Banking Fraud Alert: KYC ಸಂಬಂಧಿಸಿದಂತೆ ಫೋನ್, ಮೆಸೇಜ್ ನಿಮಗೂ ಬಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ
ಕೆವೈಸಿ ಹೆಸರಿನಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಸ್ ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಮೊಬೈಲ್ ನಂಬರ್ ಆಕ್ಟಿವೇಶನ್ ಕೇಳಿದರೆ ಕೂಡಲೇ ಜಾಗರೂಕರಾಗಿರುವಂತೆ ಎಸ್‌ಬಿಐ ಹೇಳಿದೆ. ಈ ಸಂದರ್ಭದಲ್ಲಿ ಗ್ರಾಹಕರು ಮಾಡುವ ಸಣ್ಣ ತಪ್ಪಿನಿಂದಾಗಿ ನಿಮ್ಮ ಖಾತೆಯಲ್ಲಿನ ಹಣ ಖಾಲಿಯಾಗಬಹುದು.
ಬ್ಯಾಂಕ್ ಯಾವತ್ತು ತನ್ನ ಗ್ರಾಹಕರ ವೈಯಕ್ತಿಕ ಡಾಟಾ, ಕೆವೈಸಿಯನ್ನು ಕೇಳುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಇದು ಹೊಸ ರೀತಿಯ ಆರ್ಥಿಕ ವಂಚನೆ. ವಂಚಕರು ಹೊಸ ವಿಧಾನಗಳ ಮೂಲಕ ಜನರನ್ನು ಮೋಸ ಮಾಡುವ ದಾರಿಯನ್ನ ಹುಡುಕುತ್ತಿದ್ದಾರೆ ಎಂದು ಬ್ಯಾಂಕ್ ಹೇಳಿದೆ .
ಈ ಸಂದರ್ಭದಲ್ಲಿ, ಎಸ್‌ಬಿಐನ 44.89 ಕೋಟಿ ಗ್ರಾಹಕರು ಯಾವುದೇ ರೀತಿಯಲ್ಲೂ ಖಾಸಗಿ ಡೇಟಾವನ್ನು ಹಂಚಿಕೊಳ್ಳದಂತೆ ಬ್ಯಾಂಕ್ ಎಚ್ಚರಿಕೆ ನೀಡಿದೆ. ಡಿಜಿಟಲ್ ಯುಗದಲ್ಲಿ, ಆನ್ಲೈನ್ ವಂಚಕರು, ಗ್ರಾಹಕರ ಡೇಟಾವನ್ನು ಸಂಗ್ರಹಿಸಿ, ವೆರಿಫಿಕೆಶನ್ , ಆಕ್ಟಿವೆಶನ್ KYC ಕಾಲ್ ಹೆಸರಿನಲ್ಲಿ ಫೋನ್ ಅಥವಾ ಮೆಸೇಜ್ ಮಾಡಿ, ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ ಎಂದು ಬ್ಯಾಂಕ್ ಹೇಳಿದೆ.
ಇಷ್ಟು ಮಾತ್ರವಲ್ಲ , ವಂಚಕರು ಗ್ರಾಹಕರಿಗೆ ಮತ್ತೆ ಮತ್ತೆ ಸಂದೇಶಗಳನ್ನು ಕಳುಹಿಸಿರುತ್ತಾರೆ. ಈ ಸಂದೇಶದೊಂದಿಗೆ ಒಂದು ಲಿಂಕ್ ಕೂಡಾ ಇರುತ್ತದೆ. ಇದರಲ್ಲಿರುವ ಫಾರ್ಮ್ ಅನ್ನು ಭರ್ತಿ ಮಾಡುವಂತೆ ಗ್ರಾಹಕರಿಗೆ ಸೂಚಿಸಲಾಗುತ್ತದೆ. ಗ್ರಾಹಕರು ಈ ಫಾರ್ಮ್ ಅನ್ನು ಭರ್ತಿ ಮಾಡಿದರೆಂದರೆ ಮೋಸದ ಜಾಲಕ್ಕೆ ಬಿದ್ದಂತೆಯೇ.
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರನ್ನು ಬ್ಯಾಂಕಿಂಗ್ ವಂಚನೆಯಿಂದ ರಕ್ಷಿಸಲು, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶಗಳು ಮತ್ತು ಫೋನ್ ಕರೆಗಳನ್ನು ಮಾಡಬೇಕಾಗುತ್ತದೆ. ಇದೇ ಕಾರಣದಿಂದಾಗಿ ಬ್ಯಾಂಕುಗಳು ಗ್ರಾಹಕರಿಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರುತ್ತವೆ.