ಚಿತ್ರಗಳಲ್ಲಿ ನೋಡಿ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ತ್ರಿವರ್ಣ ಧ್ವಜಾರೋಹಣ
77ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಗೌರವ ವಂದನೆ ಸ್ವೀಕರಿಸಿದರು.
77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ‘ಇದು ಆತ್ಮವಿಶ್ವಾಸದೊಂದಿಗೆ ತುಂಬಿರುವ ನವ ಭಾರತ. ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗಬೇಕಾದ ಅಗತ್ಯವಿದೆ. ದೇಶದ ಎಲ್ಲಾ ಜನರು ಭಾರತದ ಏಕತೆಯ ಮಂತ್ರ ಜಪಿಸುತ್ತಾ ಹೆಜ್ಜೆ ಹಾಕಬೇಕಿದೆ. 2047ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿರುವ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗಲಿದೆ’ ಎಂದು ಹೇಳಿದರು.
ದೇಶದ ಆರ್ಥಿಕತೆಯನ್ನು ಬಲಪಡಿಸುವುದು, ಜನರನ್ನು ಸಬಲೀಕರಣಗೊಳಿಸುವುದು ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ 5 ವರ್ಷಗಳಲ್ಲಿ ಭಾರತವನ್ನು ವಿಶ್ವದ ಟಾಪ್-3 ಆರ್ಥಿಕತೆಗಳ ಪಟ್ಟಿಯಲ್ಲಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾವು ಏನೇ ಮಾಡಿದರೂ, ನಾವು ಯಾವುದೇ ಹೆಜ್ಜೆ ಇಟ್ಟರೂ, ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಮುಂದಿನ 1 ಸಾವಿರ ವರ್ಷಗಳವರೆಗೆ ನಮ್ಮ ಗುರಿಯನ್ನು ನಿರ್ಧರಿಸುವುದಾಗಿರುತ್ತದೆ. ಅದು ಭಾರತದ ಭವಿಷ್ಯ, ಸುವರ್ಣ ಇತಿಹಾಸವನ್ನು ಬರೆಯಲಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ದೇಶದ ಜನತೆಗೆ ತಿಳಿಸಿದರು.