World Cup 2023: ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಪರೂಪದ ಇತಿಹಾಸ ಸೃಷ್ಟಿಸಿದ ಶಾಹೀನ್ ಅಫ್ರಿದಿ
ನಿನ್ನೆ (ನವೆಂಬರ್ 01, 2023) ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ನಂಬರ್-1 ಬೌಲರ್ ಆಗಿ ಹೊರಹೊಮ್ಮಿದ್ದು, ಅಪರೂಪದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಾಸ್ತವವಾಗಿ, ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಏಳು ಸ್ಥಾನ ಜಿಗಿತ ಮಾಡುವ ಮೂಲಕ ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಹಿಂದಿಕ್ಕಿ ಐಸಿಸಿ ಇತ್ತೀಚಿನ ODI ಶ್ರೇಯಾಂಕದಲ್ಲಿ ನಂಬರ್-1 ಬೌಲರ್ ಆಗಿದ್ದಾರೆ. ಇದು ಅವರ ವೃತ್ತಿ ಬದುಕಿನ ಅತ್ಯುತ್ತಮ ಶ್ರೇಯಾಂಕವಾಗಿದೆ.
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 23 ರನ್‌ಗಳಿಗೆ 3 ವಿಕೆಟ್ ಕಬಳಿಸಿದ್ದ ಶಾಹೀನ್ ಷಾ ಆಫ್ರಿದಿ ಪಾಕಿಸ್ತಾನದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಾತ್ರವಲ್ಲ, ಇದೇ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 100ನೇ ವಿಕೆಟ್ ಪಡೆದರು. ಇದರೊಂದಿಗೆ ಕೇವಲ 51 ಪಂದ್ಯಗಳಲ್ಲಿ ಈ ಅಂಕಿ ಅಂಶವನ್ನು ಮುಟ್ಟಿದ ಮೂರನೇ ಬೌಲರ್, ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 100 ವಿಕೆಟ್ ಪೂರ್ಣಗೊಳಿಸಿದ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.
ಇನ್ನೂ 2023ರ ಈ ಈ ವಿಶ್ವಕಪ್‌ನಲ್ಲಿ ಇದುವರೆಗೂ ನಡೆದಿರುವ ಏಳು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿರುವ ಶಾಹೀನ್ ಶಾ ಆಫ್ರಿದಿ ಆಸ್ಟ್ರೇಲಿಯಾದ ಆಡಮ್ ಝಂಪಾ ಅವರೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.
ವಿಶ್ವಕಪ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನದ ಅಪಾಯಕಾರಿ ವೇಗದ ಬೌಲರ್. ಪಾಕಿಸ್ತಾನದ ಈ ಮಾರಕ ಬೌಲರ್ ಒಮ್ಮೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ.