Shani Mahadasha Upay: ಜಾತಕದಲ್ಲಿ ಶನಿ ದೋಷದಿಂದ ಮುಕ್ತಿ ಪಡೆಯಲು ಸುಲಭ ಪರಿಹಾರ
ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎಂತಲೇ ಕರೆಯಲ್ಪಡುವ ಶನಿ ದೇವ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯನ್ನು ಬೆಂಬಿಡದೆ ಕಾಡುತ್ತಾನೆ. ಅದರಲ್ಲೂ ವ್ಯಕ್ತಿಯ ಜಾತಕದಲ್ಲಿ ಶನಿ ದೋಷವಿದ್ದರೆ, ಶನಿ ಮಹಾದಶ ಪ್ರಭಾವವಿದ್ದರೆ ಆಂತಹ ವ್ಯಕ್ತಿ ಆರ್ಥಿಕ ಬಿಕ್ಕಟ್ಟು, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಬಳಲುತ್ತಾನೆ ಎಂದು ಹೇಳಲಾಗುತ್ತದೆ.
ಜೀವನದಲ್ಲಿ ಎಂತಹದ್ದೇ ಕಷ್ಟವಿರಲಿ, ಸವಾಲುಗಳಿರಲಿ ಪ್ರತಿಯೊಂದಕ್ಕೂ ಪರಿಹಾರ ಒಂದು ಇದ್ದೇ ಇರುತ್ತದೆ. ಅಂತೆಯೇ, ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೋಷಕ್ಕೂ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಸುಲಭ ಪರಿಹಾರಗಳನ್ನು ಕೈಗೊಳ್ಳುವ ಮೂಲಕ ನೀವು ಜೀವನದಲ್ಲಿ ಶನಿ ದೋಷದಿಂದ ಉಂಟಾಗುವ ಅಶುಭ ಫಲಗಳನ್ನು ಕಡಿಮೆ ಮಾಡಬಹುದು. ಶನಿಯ ದುಷ್ಪರಿಣಾಮಗಳಿಂದ ಪಾರಾಗಬಹುದು ಎಂದು ಬಣ್ಣಿಸಲಾಗುತ್ತದೆ. ಅಂತಹ ಕೆಲವು ಪರಿಹಾರಗಳೆಂದರೆ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ದೋಷದಿಂದ ಮುಕ್ತಿ ಪಡೆಯಲು ಹನುಮಂತ, ಭಗವಾನ್ ಶಿವ, ಅರಳಿ ಮರಕ್ಕೆ ಪೂಜೆ ಮಾಡಬೇಕು.
ಶನಿ ದೇವನ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಶನಿ ಚಾಲೀಸಾ, ಶನಿ ಸ್ತೋತ್ರವನ್ನು ಪಠಿಸಿ.
ಶನಿ ಮಹಾದಶದಿಂದ ಪರಿಹಾರ ಪಡೆಯಲು ಪ್ರತಿ ಶನಿವಾರ, ನಿಮ್ಮ ಶಕ್ತಿಯನುಸಾರವಾಗಿ ಅಗತ್ಯ ವಸ್ತುಗಳನ್ನು ನಿರ್ಗತಿಕರಿಗೆ ದಾನ ಮಾಡಿ.
ಯಾವುದೇ ವ್ಯಕ್ತಿ ಶನಿ ಮಹಾದಶ ಪ್ರಭಾವದಲ್ಲಿದ್ದಾಗ ಅಂತಹ ವ್ಯಕ್ತಿ ಕೇವಲ ಸಾತ್ವಿಕ ಆಹಾರಗಳನ್ನಷ್ಟೇ ತೆಗೆದುಕೊಳ್ಳಬೇಕು. ಮಾಂಸಾಹಾರ, ಮದ್ಯಪಾನ, ಧೂಮಪಾನಗಳಿಂದ ದೂರ ಇರಬೇಕು.
ನ್ಯಾಯದ ದೇವರು ಶನಿ ದೇವನು ಯಾವುದೇ ರೀತಿಯ ಸುಳ್ಳು, ಬೇರೆಯವರಿಗೆ ಮೋಸ ಮಾಡುವುದು, ವಂಚನೆ ಮಾಡುವುದನ್ನು ಸಹಿಸುವುದಿಲ್ಲ. ಅದರಲ್ಲೂ ಶನಿ ಮಹಾದಶ ಪ್ರಭಾವವಿದ್ದಾಗ ಇಂತಹವುಗಳಿಂದ ದೂರ ಉಳಿಯಿರಿ.
ಶನಿ ಕೈಲಾಗದವರೊಂದಿಗಿನ ದುರ್ವರ್ತನೆಯನ್ನು ಸಹಿಸುವುದಿಲ್ಲ. ನೀವು ಶನಿ ದೋಷದಿಂದ ಮುಕ್ತಿ ಹೊಂದಲು ಬಯಸಿದರೆ ಯಾರೊಂದಿಗೂ ಅನುಚಿತವಾಗಿ ವರ್ತಿಸುವುದನ್ನು ತಪ್ಪಿಸಿ. ಮಾತ್ರವಲ್ಲ, ಕೈಲಾಗದವರೊಂದಿಗೆ ಕೆಟ್ಟದಾಗಿ ವರ್ತಿಸಬೇಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.