ವಾರಸುದಾರರೇ ಇಲ್ಲದ ಶರತ್ ಬಾಬು ಎಷ್ಟು ಕೋಟಿ ಆಸ್ತಿಯ ಒಡೆಯಾ ಗೊತ್ತಾ..? ನಟನ ನಿಧನದ ನಂತರ ಯಾರ ಕೈ ಸೇರಿತು ಸಂಪತ್ತು..
ಕನ್ನಡ ಚಿತ್ರರಂಗ ಅಷ್ಟೆ ಅಲ್ಲದೆ, ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರಾಗಿ ಸಿನಿಮಾ ಇಂಡಸ್ಟ್ರಿಗೆ ಶರತ್ ಬಾಬು ಎಂಟ್ರಿ ಕೊಟ್ಟರು . ಕನ್ನಡ, ತೆಲುಗು ಅಷ್ಟೆ ಅಲ್ಲದೆ ಶರತ್ ಬಾಬು ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳೊಂದಿಗೆ ಸ್ಟಾರ್‌ಡಮ್ ಗಳಿಸಿದ್ದು, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ತಮಿಳಿನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಸಂಪಾದಿಸಿದ ಶರತ್ ಬಾಬು ಚೆನ್ನೈನಲ್ಲಿ ನೆಲೆಸಿದ್ದರು. ಕೆಲ ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದ ಶರತ್ ಬಾಬು ನಂತರ ಚೆನ್ನೈನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು. ಇಂಡಸ್ಟ್ರಿಯಲ್ಲಿ ಶರತ್ ಬಾಬು ಅವರ ಆತ್ಮೀಯ ಗೆಳೆಯ ಎಂದರೆ ಸೂಪರ್ ಸ್ಟಾರ್ ರಜನಿಕಾಂತ್, ಇವರಿಬ್ಬರ ಜೋಡಿಯ ಮುತ್ತು ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ನಟ ಶರತ್ ಬಾಬು 1971 ರಲ್ಲಿ ರಮಾಪ್ರಭಾ ಅವರನ್ನು ವಿವಾಹವಾದರು. ಹಳೆ ತಲೆಮಾರಿನ ಲೇಡಿ ಕಾಮಿಡಿಯನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎಲ್ಲರಿಗೂ ಚಿರಪರಿಚಿತ ರಮಾಪ್ರಭಾ ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ, ದಂಪತಿಗಳು 1988 ರಲ್ಲಿ ವಿಚ್ಛೇದನ ಪಡೆದರು.
ನಂತರ ನಟ ಶರತ್ಬಾಬು ಎಂಎನ್ ನಂಬಿಯಾರ್ ಅವರ ಪುತ್ರಿ ಸ್ನೇಹಲತಾ ದೀಕ್ಷಿತ್ ಅವರನ್ನು ವಿವಾಹವಾದರು. ಆದರೆ ಈ ಸಂಬಂಧ ಕೂಡ ಹೆಚ್ಚಿನ ಕಾಲ ಉಳಿಯಲಿಲ್ಲ, ಈ ದಂಪತಿಗಳು 2011 ರಲ್ಲಿ ವಿಚ್ಛೇದನ ಪಡೆದರು. ಎರಡು ಮದುವೆಯಾದರೂ ಕೂಡ ಶರತ್ ಬಾಬು ಅವರಿಗೆ ವಾರಸುದಾರರಿರಲಿಲ್ಲ.
ಈ ನಡುವೆ ಅಪರೂಪದ ಸೆಪ್ಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಶರತ್ ಬಾಬು ಕಳೆದ ವರ್ಷ ಮೇ 22 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದರು. ಈ ಹಿನ್ನೆಲೆಯಲ್ಲಿ ದಿವಂಗತ ನಟ ಶರತ್ ಬಾಬು ಆಸ್ತಿಯ ಮಾಹಿತಿ ಹೊರಬಿದ್ದಿದೆ. ಇದರ ಪ್ರಕಾರ ಚೆನ್ನೈ, ಬೆಂಗಳೂರು, ಹೈದರಾಬಾದ್ ನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮನೆಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು ಮತ್ತು ಕಂಪನಿಗಳಂತಹ ಅನೇಕ ಆಸ್ತಿಗಳನ್ನು ಅವರು ಹೊಂದಿದ್ದಾರೆ. ಶರತ್ಬಾಬು ಅವರಿಗೆ ಮಕ್ಕಳಿಲ್ಲದ ಕಾರಣ ಈ ಆಸ್ತಿಯನ್ನು ಅವರ ಸಹೋದರರ ಮಕ್ಕಳಿಗೆ ನೀಡಬೇಕಿದೆ.
ಶರತ್ ಬಾಬು ಅವರ ಸಹೋದರ ಮಾತನಾಡಿದ್ದು, “ಶರತ್ ಬಾಬು ನಮ್ಮ ಒಡಹುಟ್ಟಿದವರಲ್ಲಿ ನಾಲ್ಕನೆಯವರು ಮತ್ತು ಅವರು ನಮ್ಮನ್ನು ತಂದೆಯಂತೆ ನೋಡಿಕೊಂಡರು. ನಾವು ಒಗ್ಗಟ್ಟಾಗಿದ್ದೇವೆ. ಅವರು ತಮ್ಮ ಆಸ್ತಿಯಲ್ಲಿ ಏನಾದರೂ ಕೊಟ್ಟಿದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ. ಅವರು ಯಾವುದೇ ಉಯಿಲು ಬರೆದಿದ್ದರೆ ನಮಗೆ ಯಾವುದೇ ತೊಂದರೆ ಇಲ್ಲ. ಇಲ್ಲದಿದ್ದರೆ ಆಸ್ತಿಯನ್ನು ನಮ್ಮ ಕುಟುಂಬದ ಸದಸ್ಯರಿಗೆ ಹಂಚಲಾಗುತ್ತದೆ. ಇದು ನಮ್ಮ ಕುಟುಂಬದ ವೈಯಕ್ತಿಕ ವಿಚಾರವಾಗಿದ್ದು, ಇತರರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ" ಎಂದರು.