ಭಗವದ್ಗೀತೆ ಸ್ತೋತ್ರದ ಸಾಲುಗಳನ್ನು ಹಂಚಿಕೊಂಡ ಶೋಯೆಬ್ ಅಖ್ತರ್..!
Shoaib Akhtar: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಬಾಲ್ ಬೀಸಿದ ವಿಶ್ವದಾಖಲೆ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ, ಅಖ್ತರ್ ಗಂಟೆಗೆ 161.3 ಸ್ಪೀಡ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ಈ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ದಾಖಲೆ ಸೃಷ್ಟಿಯಾಗಿ 2 ದಶಕಗಳು ಕಳೆದರೂ ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಈ ನಡುವೆ ಪಾಕಿಸ್ತಾನ ತಂಡದ ಈ ಮಾಜಿ ಆಟಗಾರ ಸುದ್ದಿಯಲ್ಲಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ ಈ ಸುದ್ದಿಗೆ ಪ್ರಮುಖ ಕಾರಣವಾಗಿದೆ.
ಶೋಯೆಬ್ ಅಖ್ತರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಗವದ್ಗೀತೆ ಶ್ಲೋಕವನ್ನು ಹಂಚಿಕೊಂಡಿದ್ದಾರೆ. ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರು ಇಲ್ಲ ಎಂದು ಹೇಳುವ ಸ್ತೋತ್ರದ ವಿಡಿಯೋವನ್ನು ಅಖ್ತರ್ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪಾಕಿಸ್ತಾನಿ ಕ್ರಿಕೆಟಿಗನ ಈ ಪೋಸ್ಟ್ ಅನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಶ್ಲಾಘಿಸುತ್ತಿದ್ದರೆ, ಪಾಕಿಸ್ತಾನದ ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಎಷ್ಟೇ ವಿರೋಧಗಳು ವ್ಯಕ್ತವಾದರೂ ಕೂಡ ಶೋಯಬ್ ಈ ಪೋಸ್ಟ್ ತೆಗೆಯದೆ ಹಾಗೆಯೇ ಇಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಶೋಯೆಬ್ ಅಖ್ತರ್ ಕೆಲ ದಿನಗಳ ಹಿಂದೆ ಕೊನೆಗೊಂಡ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಬೆಂಬಲಿಸಿದ್ದರು. ಟೀಂ ಇಂಡಿಯಾ ಕೂಡ ಟಿ20 ವಿಶ್ವಕಪ್ ಗೆಲ್ಲಬೇಕು ಎಂದು ಹೇಳಿದ್ದರು. ಕಳೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತಿದ್ದ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲಬೇಕು ಮತ್ತು ರೋಹಿತ್ ಶರ್ಮಾ ಅದಕ್ಕೆ ಅರ್ಹರು ಎಂದು ಶೋಯಬ್ ತಮ್ಮ ಅಭಿಪ್ರಾಯ ವ್ಯಕ್ತಪಡೆಸಿದ್ದರು.
ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ನಂತರ ರೋಹಿತ್ ಶರ್ಮಾ ಅವರನ್ನು ಅಖ್ತರ್ ಅಭಿನಂದಿಸಿದ್ದಾರೆ.