Shri Ram Temple Construction: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಹೇಗಿದೆ ಗೊತ್ತಾ..?
ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನ ಬಳಿಕ 2020ರ ಆಗಸ್ಟ್ 5ರಂದು ಪ್ರಧಾನಿ ಮೋದಿಯವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 2024ರ ಜನವರಿ 22ರಂದು ನಡೆಯಲಿರುವ ರಾಮ್ ಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ದೇಶದ ಪ್ರತಿ ಹಿಂದೂಗಳ ಮನೆಗೂ ಆಹ್ವಾನ ಪತ್ರ ತಲುಪುವ ಕೆಲಸವನ್ನು RSS ಮಾಡುತ್ತಿದೆ. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಅಯೋಧ್ಯೆಯಲ್ಲಿ ʼರಾಮಲಲ್ಲಾ ಪ್ರತಿಷ್ಠಾಪನೆʼ ಸಮಾರಂಭ ನಡೆಯಲಿದೆ.
2023ರ ಡಿಸೆಂಬರ್ ವೇಳೆಗೆ ಗರ್ಭಗುಡಿ ಮತ್ತು ರಾಮನ ವಿಗ್ರಹವಿರುವ ದೇವಾಲಯದ ಕೆಳ ಮಹಡಿಯು ಪೂಜೆಗೆ ಸಿದ್ಧವಾಗಲಿದೆ ಅಂತಾ ದೇವಾಲಯದ ಪ್ರಾಧಿಕಾರ ತಿಳಿಸಿದೆ. ರಾಮಮಂದಿರದ ನೆಲ ಅಂತಸ್ತಿನ ಉದ್ದವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 380 ಅಡಿ ಇದ್ದು, ಉತ್ತರ-ದಕ್ಷಿಣ ದಿಕ್ಕಿನ ಅಗಲವು 250 ಅಡಿ ಇರಲಿದೆ. ಗರ್ಭಗೃಹದ ಗೋಪುರವು ನೆಲದಿಂದ 181 ಅಡಿಯಷ್ಟು ಎತ್ತರವಿರಲಿದೆ.
ಕರ್ನಾಟಕ ಮತ್ತು ತೆಲಂಗಾಣದ ಗ್ರಾನೈಟ್ ಕಲ್ಲುಗಳನ್ನು ಬಳಸಿ ರಾಮಮಂದಿರದಲ್ಲಿ ಸ್ತಂಭವನ್ನು ನಿರ್ಮಿಸಲಾಗಿದೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬಂಸಿ-ಪಹಾರ್‌ಪುರ ಪ್ರದೇಶದ ಬೆಟ್ಟಗಳ ಗುಲಾಬಿ ಬಣ್ಣದ ಮರಳುಗಲ್ಲಿನಿಂದ ಮಂದಿರವನ್ನು ನಿರ್ಮಿಸಲಾಗುತ್ತದೆ. ಸುಮಾರು 17,000 ಗ್ರಾನೈಟ್ ಬ್ಲಾಕ್‌ಗಳನ್ನು ಸ್ತಂಭದ ಕೆಲಸದಲ್ಲಿ ಬಳಸಲಾಗುತ್ತಿದೆ.
Larsen & Toubro ಕಂಪನಿಗೆ ದೇವಾಲಯ ಮತ್ತು ಗೋಡೆಗಳ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್‌ಗಳನ್ನು ಯೋಜನಾ ನಿರ್ವಹಣಾ ಸಲಹೆಗಾರರಾಗಿ ನೇಮಿಸಲಾಗಿದೆ.
ದೇಶದ ಜನರು 2023ರ ಅಂತ್ಯಕ್ಕೆ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ದರ್ಶನ ಪಡೆಯಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದರು. ಮಂದಿರ ನಿರ್ಮಾಣ ಕಾರ್ಯವು ಡಿಸೆಂಬರ್ 2023ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2024ರ ಜನವರಿಯಲ್ಲಿ ಬರುವ ಮಕರ ಸಂಕ್ರಾಂತಿ ಹಬ್ಬದ ವೇಳೆಗೆ ಗರ್ಭಗುಡಿಯಲ್ಲಿ ಶ್ರೀರಾಮನು ವಿರಾಜಮಾನನಾಗುವ ನಿರೀಕ್ಷೆಯಿದೆ.