Sri M meets Sri Rajinikanth : ರಜಿನಿಕಾಂತ್ ಭೇಟಿ ಮಾಡಿದ ಹಿಮಾಲಯದ ಯೋಗಿ!!
ಹಿಮಾಲಯದ ರಮ್ಯತೆಯ ಒಡಲಲ್ಲಿ ನೂರಾರು ವರ್ಷಗಳಿಂದಲೂ ಜೀವಿಸಿ, ಮೋಕ್ಷ- ಮುಕ್ತಿ, ಆತ್ಮ ಸಾಕ್ಷತ್ಕಾರದ ಹಾದಿ ತೋರುತ್ತಿದ್ದಾರೆ ಎಂದು ನಂಬಲಾಗಿರುವ ಮಹಾವತಾರ್ ಬಾಬಾಜಿ ಅವರ ಶಿಷ್ಯರ ಸಮಾಗಮ ಇಂದು ಚೆನ್ನೈನ ರಜಿನಿಕಾಂತ್ ನಿವಾಸದಲ್ಲಾಗಿದೆ.
ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಹಿಮಾಲಯದದ ಯೋಗಿ, ದಾರ್ಶನಿಕ ಶ್ರೀ ಎಂ ಇಬ್ಬರೂ ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.
ಬಾಬಾಜಿ ಅವರ ಅನುಯಾಯಿ ಆಗಿರುವ ರಜಿನಿಕಾಂತ್ ಆಗಾಗ್ಗೆ ಹಿಮಾಲಯದ ಗುಹೆಗಳಲ್ಲಿ ಧ್ಯಾನಕ್ಕೆ ಕೂರುವುದು ಎಲ್ಲರಿಗೂ ತಿಳಿದಿದ್ದೇ ಆಗಿದ್ದು ಯೋಗಿಗಳೊಟ್ಟಿಗೆ ಸಮಾಧಿ ಸ್ಥಿತಿಯಲ್ಲಿ ರಜಿನಿಕಾಂತ್ ಮಾತನಾಡುತ್ತಾರೆ ಎಂದು ಹೇಳಲಾಗುತ್ತದೆ.
ಅದೇ ರೀತಿ, ಶ್ರೀ ಎಂ ಅವರು ಕೇರಳದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿ ಬಳಿಕ ಪೂರ್ವಜನ್ಮದ ಆಧ್ಯಾತ್ಮಿಕ ಹಾದಿಯನ್ನು ಮುಂದುವರೆಸಿ ಹಿಂದೂ ಯೋಗಿಯಾಗಿದ್ದಾರೆ. " 'ಹಿಮಾಲಯದ ಗುರುವಿನ ಗರಡಿಯಲ್ಲಿ' ಎಂಬ ತಮ್ಮ ಆತ್ಮಕಥೆಯಲ್ಲಿ ಹಿಮಾಲಯದಲ್ಲಾದ ನೂರಾರು ರೋಮಾಂಚಕ ಘಟನೆಗಳು, ಉಯ್ಯಾಲೆ ಮೇಲೆ ಕುಳಿತು ಸಾಯಿ ಬಾಬಾ ದರ್ಶನ ಕೊಡುವುದನ್ನು ದಾಖಲಿಸಿದ್ದಾರೆ.
ಶ್ರೀ ಎಂ ಹಾಗೂ ರಜಿನಿಕಾಂತ್ ಮಹಾವತಾರ್ ಬಾಬಾಜಿ ಅವರ ಅನುಯಾಯಿಗಳಾಗಿದ್ದು ಹಿಮಾಲಯದಲ್ಲಿ ಸಾಧನೆ ಮಾಡಿದ ಯೋಗಿಗಳಾಗಿದ್ದಾರೆ. ಅವರಿಬ್ಬರ ಇಂದಿನ ಭೇಟಿ ಆಧ್ಯಾತ್ಮಿಕತೆಯಲ್ಲಿ ಒಲವಿರುವವರನ್ನು ಸೆಳೆದಿದೆ. ಅಂದಹಾಗೆ, ಶ್ರೀ ಎಂ ಅವರು ಕಳೆದ ಜುಲೈನಲ್ಲಿ " The Friend- mind, body, soul, well-being" ಎಂಬ ಕೃತಿ ಹೊರತಂದಿದ್ದಾರೆ.