ಟೂರ್ನಿಯುದ್ದಕ್ಕೂ ಒಂದೇ ಒಂದು ಸೋಲು ಕಾಣದೆ ವಿಶ್ವಕಪ್ ಗೆದ್ದಿರುವುದು ಈ 2 ತಂಡಗಳು ಮಾತ್ರ: ಯಾವುವವು ಗೊತ್ತಾ?
ಪ್ರಸ್ತುತ ಟಿ20 ವಿಶ್ವಕಪ್ 2024 ನಡೆಯುತ್ತಿದ್ದು, ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಕೊನೆಯ ಅಂದರೆ ಸೆಮಿಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿದರೆ, ಮುಂದೆ ಸೌತ್ ಆಫ್ರಿಕಾ ವಿರುದ್ಧ ಅಂತಿಮ ಕದನದಲ್ಲಿ ಮುಖಾಮುಖಿಯಾಗಲಿವೆ. ಈ ಸಂದರ್ಭದಲ್ಲಿ ಉಭಯ ತಂಡಗಳಿಗೆ ವಿಶೇಷ ದಾಖಲೆ ಬರೆಯುವ ಅವಕಾಶವಿದೆ.
ಅದೇನೆಂದರೆ, ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಜೇಯರಾಗಿ ಫೈನಲ್ ಪ್ರವೇಶಿಸಿದೆ. ಅಂತೆಯೇ ಇಂದು ಸೆಮಿಫೈನಲ್ ಪಂದ್ಯವನ್ನಾಡುತ್ತಿರುವ ಭಾರತ ಕೂಡ ಇದುವರೆಗೆ ಅಜೇಯರಾಗಿ ಉಳಿದಿದೆ. ಹೀಗಿರುವಾಗ ಭಾರತ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಫೈನಲ್’ಗೆ ಎಂಟ್ರಿ ಕೊಟ್ಟರೆ, ಆಗ ಗೆಲ್ಲುವ ಯಾವುದೇ ತಂಡವು ಅಜೇಯವಾಗಿ ಟ್ರೋಫಿ ಎತ್ತಿಹಿಡಿದ ಕೀರ್ತಿಗೆ ಭಾಜನರಾಗಲಿದೆ.
ಇಂತಹ ಸಂದರ್ಭದಲ್ಲಿ ನಾವಿಂದು ಈ ವರದಿಯಲ್ಲಿ ಯಾವ ತಂಡ ಟೂರ್ನಿಯಲ್ಲಿ ಅಜೇಯರಾಗಿ ಉಳಿದು ವಿಶ್ವಕಪ್ ಟ್ರೋಫಿ ಗೆದ್ದಿದೆ ಎಂಬುದರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈ ದಾಖಲೆ ಏಕದಿನ ವಿಶ್ವಕಪ್ ಆಧರಿಸಿದೆ.
ಇನ್ನು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಟೂರ್ನಿಯುದ್ದಕ್ಕೂ ಒಂದೇ ಒಂದು ಸೋಲು ಕಾಣದೆ ವಿಶ್ವಕಪ್ ಗೆದ್ದಿರುವುದು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಮಾತ್ರ.
ವೆಸ್ಟ್ ಇಂಡೀಸ್ 1975 ರಲ್ಲಿ ಇಂಗ್ಲೆಂಡ್’ನಲ್ಲಿ ಈ ಸಾಧನೆ ಮಾಡಿತ್ತು. ಕೆರಿಬಿಯನ್ ತಂಡವು ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿತ್ತು. ಕ್ಲೈವ್ ಲಾಯ್ಡ್ ತಂಡವು 1975 ರ ವಿಶ್ವಕಪ್’ನಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿತ್ತು.
ಅದಾದ ಬಳಿಕ ಅಂದರೆ 1979ರ ವಿಶ್ವಕಪ್’ನಲ್ಲೂ ವೆಸ್ಟ್ ಇಂಡೀಸ್ ತನ್ನ ಪ್ರಾಬಲ್ಯ ಮುಂದುವರೆಸಿತ್ತು. ಅಂದು ಸಹ ಅಜೇಯರಾಗಿ ಉಳಿದು ವಿಶ್ವಕಪ್ ಟ್ರೋಫಿ ಗೆದ್ದಿತ್ತು.
ಇನ್ನು 2003ರಲ್ಲಿ ಆಸ್ಟ್ರೇಲಿಯಾ ಇಂತಹದ್ದೇ ಸಾಧನೆ ತೋರಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಸುದೀರ್ಘ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯವು ಆಡಿದ 11 ಪಂದ್ಯಗಳನ್ನು ಗೆದ್ದುಕೊಂಡು ಅಜೇಯರಾಗಿ ವಿಶ್ವಕಪ್ ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು,
ಇನ್ನು ವೆಸ್ಟ್ ಇಂಡೀಸ್’ನಂತೆಯೇ ಆಸ್ಟ್ರೇಲಿಯಾ ಕೂಡ ಮತ್ತೊಮ್ಮೆ ಅಜೇಯರಾಗಿ ಉಳಿದು ವಿಶ್ವಕಪ್ ಗೆದ್ದಿತು. ಅದು 2007ರಲ್ಲಿ. ಕೆರಿಬಿಯನ್ ದ್ವೀಪಗಳಲ್ಲಿ ಆಸ್ಟ್ರೇಲಿಯಾ ಈ ಸಾಧನೆಯನ್ನು ಮಾಡಿತ್ತು.