ನಂ.1 ಧನಾಧಿಪತಿ ಎಲಾನ್ ಮಸ್ಕ್ ಗೆ ಭಾರತ ಕೊಟ್ಟ ಆಫರ್ ಏನು ಗೊತ್ತಾ..?
ಈ ವರ್ಷ ಜೂನ್ - ಜುಲೈ ಹೊತ್ತಿಗೆ ಭಾರತ ಪ್ರವೇಶಿಸಲಿದೆ ಟೆಸ್ಲಾ.! : ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ನೊಂದಣಿ ಆರಂಭಿಸಿದೆ. ಜೂನ್-ಜುಲೈ ಹೊತ್ತಿಗೆ ಟೆಸ್ಲಾ ಕಾರು ಭಾರತ ಪ್ರವೇಶಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟೆಸ್ಲಾ ಮೊತ್ತ ಮೊದಲು ತನ್ನ ಮಾಡೆಲ್ 3 ಎಲೆಕ್ಟ್ರಿಕ್ ಸೇಡನ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಲಿದೆ.
ಟೆಸ್ಲಾ ಭಾರತದಲ್ಲಿಯೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿದೆ. ಬಳಿಕ ಅದನ್ನು ವಿದೇಶಗಳಿಗೆ ರಫ್ತು ಮಾಡಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಟೆಸ್ಲಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಅಸೆಂಬಲ್ ಮಾಡುವ ಬದಲು, ಸ್ಥಳೀಯ ಮಾರಾಟಗಾರರನ್ನು ಬಳಸಿಕೊಂಡು ಭಾರತದಲ್ಲಿಯೇ ಕಾರು ಉತ್ಪಾದಿಸಬೇಕು ಎಂದು ಹೇಳಿದ್ದಾರೆ.
ಚೀನಾಕ್ಕಿಂತಲೂ ಕಡಿಮೆಯಾಗಲಿದೆ ಉತ್ಪಾದನಾ ವೆಚ್ಚ: ಭಾರತದಲ್ಲೇ ಉತ್ಪಾದನೆ ಆರಂಭಿಸುವುದಾದರೆ, ಟೆಸ್ಲಾಗೆ ಸಾಕಷ್ಟು ರಿಯಾಯಿತಿ ನೀಡಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ಟೆಸ್ಲಾ ಭಾರತದಲ್ಲಿಯೇ ಉತ್ಪಾದನೆ ಶುರುಮಾಡುವುದಾದರೆ, ಅದರ ನಿರ್ಮಾಣ ವೆಚ್ಚ ಅತ್ಯಂತ ಕಡಿಮೆಯಾಗಲಿದೆ ಎಂಬ ಭರವಸೆಯನ್ನು ಗಡ್ಕರಿ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಗೆ ನೀಡಿದ್ದಾರೆ. ಚೀನಾಗೆ ಹೋಲಿಸಿದರೆ ಭಾರತದಲ್ಲಿಯೇ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಅತಿದೊಡ್ಡ ಮಾರುಕಟ್ಟೆ ಇದೆ. ಕಾರು ನಿರ್ಮಾಣ ತಜ್ಞರ ದೊಡ್ಡ ಸಮೂಹವೇ ಭಾರತದಲ್ಲಿದೆ. ಬ್ಯಾಟರಿಗೆ ಬೇಕಾಗುವ ಲೀಥಿಯಂ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ಯಾವುದೇ ಭರವಸೆ ನೀಡದ ಟೆಸ್ಲಾ : ಭಾರತವೇನೋ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲೇ ತಯಾರಿಸುವಂತೆ ಎಲಾನ್ ಮಸ್ಕ್ ಗೆ ಭರ್ಜರಿ ಆಫರ್ ನೀಡಿದೆ. ಆದರೆ ಭಾರತದಲ್ಲಿ ಸ್ಥಳೀಯವಾಗಿ ಟೆಸ್ಲಾ ಕಾರುಗಳನ್ನು ಉತ್ಪಾದಿಸುವ ಬಗ್ಗೆ ಎಲಾನ್ ಮಸ್ಕ್ ಇದುವರೆಗೆ ಯಾವುದೇ ಭರವಸೆ ನೀಡಿಲ್ಲ.
ಭಾರತದ ಇ-ವಾಹನಗಳ ಮಾರುಕಟ್ಟೆ ತೀರಾ ಸಣ್ಣದು: ಕಳೆದ ಸಲ ಭಾರತದಲ್ಲಿ 24 ಲಕ್ಷ ವಾಹನ ಉತ್ಪಾದನೆಯಾಗಿದೆ. ಇದರಲ್ಲಿ ಇ-ವಾಹನಗಳ ಸಂಖ್ಯೆ ಬರೀ 5000. ಭಾರತದಲ್ಲಿ ಚಾರ್ಜಿಂಗ್ ಸೌಕರ್ಯ ಕೂಡಾ ಅತೀ ಕಡಿಮೆ. ಇ-ಕಾರುಗಳ ಬೆಲೆ ಕೂಡಾ ದುಬಾರಿ. ಎಲೆಕ್ಟ್ರಿಕ್ ಕಾರುಗಳ ಕುರಿತು ಒಂದು ಸಮಗ್ರ ನೀತಿ ಭಾರತದಲ್ಲಿ ಇಲ್ಲ. ಹಾಗಾಗಿ, ಜನ ಇನ್ನೂ ಕೂಡಾ ಇ-ಕಾರುಗಳತ್ತ ಮನಸ್ಸು ಮಾಡಿಲ್ಲ.
ಚೀನಾದಲ್ಲಿ ಕಾಲೂರುತ್ತಿರುವ ಟೆಸ್ಲಾ : ಚೀನಾದಲ್ಲಿ ಈಗಾಗಲೇ ಟೆಸ್ಲಾ ಇ-ಕಾರುಗಳನ್ನು ಉತ್ಪಾದಿಸುತ್ತಿದೆ. 2020ರಲ್ಲಿ 12.5 ಲಕ್ಷ ಇ-ಕಾರುಗಳನ್ನು ಟೆಸ್ಲಾ ಚೀನಾದಲ್ಲಿ ಮಾರಾಟ ಮಾಡಿದೆ. ಕಳೆದ ವರ್ಷ ಟೆಸ್ಲಾ 2 ಕೋಟಿ ಇ-ಕಾರುಗಳನ್ನು ಉತ್ಪಾದಿಸಿದೆ. ಅದರಲ್ಲಿ ಬಹುಪಾಲು ಕಾರುಗಳನ್ನು ಟೆಸ್ಲಾ ಚೀನಾದಲ್ಲೇ ಮಾರಾಟ ಮಾಡಿದೆ.