ಆಘಾತದಲ್ಲಿ ಕ್ರಿಕೆಟ್ ಲೋಕ... ಜಗತ್ತೇ ಕೊಂಡಾಡಿದ ಬೌಲರ್‌ಗೆ ಕ್ರಿಕೆಟ್‌ನಿಂದ ನಿಷೇಧ: 712 ವಿಕೆಟ್ ಕಬಳಿಸಿ ಮೆರೆಯುತ್ತಿದ್ದ ಆಟಗಾರನಿಗೆ ಐಸಿಸಿಯಿಂದ ಕಠಿಣ ಶಿಕ್ಷೆ.. ಕಾರಣವೇನು?
ಬಾಂಗ್ಲಾದೇಶದ ದಿಗ್ಗಜ ಆಟಗಾರ ಶಕೀಬ್ ಅಲ್ ಹಸನ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. 712 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಈ ಆಲ್ ರೌಂಡರ್ ಇನ್ನು ಮುಂದೆ ಬೌಲಿಂಗ್ ಮಾಡಲು ಸಾಧ್ಯವಾಗೋದಿಲ್ಲ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅವರನ್ನು ನಿಷೇಧಿಸಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಶಕೀಬ್ ಮೇಲಿನ ನಿಷೇಧವನ್ನು ಖಚಿತಪಡಿಸಿದೆ.
ಐಸಿಸಿ ಸದಸ್ಯ ರಾಷ್ಟ್ರಗಳ ಎಲ್ಲಾ ಪಂದ್ಯಾವಳಿಗಳಲ್ಲಿ ಬೌಲಿಂಗ್ ಮಾಡಲು ಶಕೀಬ್ ಅವರನ್ನು ನಿಷೇಧಿಸಲಾಗಿದೆ ಎಂದು ಬಿಸಿಬಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಇದರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳೂ ಸೇರಿವೆ.
ಅಕ್ರಮ ಬೌಲಿಂಗ್ ಕ್ರಮಕ್ಕಾಗಿ ಶಕೀಬ್ ಅವರನ್ನು ಇಸಿಬಿ ಬೌಲಿಂಗ್‌ನಿಂದ ಅಮಾನತುಗೊಳಿಸಿತ್ತು. ಶಕೀಬ್ ತನ್ನ ಬೌಲಿಂಗ್ ಕ್ರಮವನ್ನು ತೆರವುಗೊಳಿಸಲು ಮತ್ತು ಅಮಾನತು ಹಿಂತೆಗೆದುಕೊಳ್ಳುವ ಪ್ರಯತ್ನದಲ್ಲಿ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರದಲ್ಲಿ ಮರು ಮೌಲ್ಯಮಾಪನಕ್ಕೆ ಶೀಘ್ರದಲ್ಲೇ ಹಾಜರಾಗಲಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ನಡೆದ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಪಂದ್ಯದ ವೇಳೆ ಶಕೀಬ್ ಅನುಮಾನಾಸ್ಪದ ಬೌಲಿಂಗ್ ಕ್ರಮಕ್ಕಾಗಿ ಸುದ್ದಿಯಾಗಿದ್ದರು. ಈ ತಿಂಗಳ ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ICC-ಮನ್ನಣೆ ಪಡೆದ ಪರೀಕ್ಷಾ ಕೇಂದ್ರವಾದ ಲೌಬರೋ ವಿಶ್ವವಿದ್ಯಾಲಯದಲ್ಲಿ ಅವರ ಬೌಲಿಂಗ್ ಕ್ರಿಯೆಯ ಟೆಸ್ಟ್‌ನಲ್ಲೂ ಸಹ ವಿಫಲರಾಗಿದ್ದರು.
"ರಾಷ್ಟ್ರೀಯ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ವ್ಯಾಪ್ತಿಗೆ ಒಳಪಡುವ ಸ್ಪರ್ಧೆಗಳಲ್ಲಿ ಬೌಲಿಂಗ್ ಮಾಡುವುದನ್ನು ಅಮಾನತುಗೊಳಿಸಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ತಿಳಿಸಲಾಗಿದೆ" ಎಂದು ಬಿಸಿಬಿ ತಿಳಿಸಿದೆ.
ಇದರ ಪರಿಣಾಮವಾಗಿ, ಶಕೀಬ್ ದೇಶೀಯ ಕ್ರಿಕೆಟ್ ಸ್ಪರ್ಧೆಗಳಲ್ಲಿ ಮತ್ತು ಬಾಂಗ್ಲಾದೇಶದ ಹೊರಗಿನ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದರಿಂದ ಅಮಾನತುಗೊಳಿಸಲಾಗಿದೆ. ಆ್ಯಕ್ಷನ್ ಟೆಸ್ಟ್‌ನಲ್ಲಿ ಕ್ಲೀನ್ ಎನಿಸಿದರೆ ಮತ್ತೊಮ್ಮೆ ಬೌಲಿಂಗ್‌ಗೆ ಅವಕಾಶ ನೀಡಲಾಗುತ್ತದೆ.
ಶಕೀಬ್ 2007 ರಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಕ್ಕೂ ಮುನ್ನ 2006ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷದಲ್ಲಿ ಅವರು ತಮ್ಮ ಮೊದಲ ಟಿ20 ಪಂದ್ಯವನ್ನೂ ಆಡಿದ್ದರು. ಶಕೀಬ್ ಬಾಂಗ್ಲಾದೇಶ ಪರ 71 ಟೆಸ್ಟ್, 247 ODI ಮತ್ತು 129 T20 ಪಂದ್ಯಗಳನ್ನು ಆಡಿದ್ದಾರೆ.