ಕ್ರಿಕೆಟ್‌ ಲೋಕದಲ್ಲಿ ಅರಸನಂತೆ ಮೆರೆದವನಿಗೆ ಇಂದು ಬೇಡಿ ತಿನ್ನುವ ಸ್ಥಿತಿ..! ಚಪ್ಪಲಿ ಕೊಳ್ಳಲೂ ಕಾಸಿಲ್ಲದೆ ಪರದಾಡುತ್ತಿದ್ದಾನೆ ಅಂದಿನ ʼದಿಗ್ಗಜʼ

Mon, 16 Dec 2024-8:15 pm,

 ಪಂದ್ಯದ ಹೊರತಾಗಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕಾರಿಡಾರ್‌ನಲ್ಲಿ ಬಹಳಷ್ಟು ಸುದ್ದಿಯಾಗುತ್ತಿರುವುದು ವಿನೋದ್ ಕಾಂಬ್ಳಿ. ಚಿಕ್ಕ ವಯಸ್ಸಿನಲ್ಲೇ ಬ್ಯಾಟಿಂಗ್ ಮೂಲಕ ಎಲ್ಲರ ಹೀರೋ ಎನಿಸಿಕೊಂಡಿದ್ದ ವಿನೋದ್ ಕಾಂಬ್ಳಿ ಇಂದು ಬಹಳಷ್ಟು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

 

ಸರಿಯಾಗಿ ನಡೆಯಲು ಬಿಡಿ, ಮಾತನಾಡಲೂ ಆಗದಂತಾಗಿದ್ದು ವಿನೋದ್‌ ಕಾಂಬ್ಳಿಯೇ ಇದು!? ಎಂಬಷ್ಟು ಬದಲಾಗಿದ್ದಾರೆ. ಆದರೆ ಇವರಕ್ಕಿಂತಲೂ ಹೆಚ್ಚಿನ ಮಟ್ಟಿಗೆ ಹೀನಾಯ ಸ್ಥಿತಿ ತಲುಪಿರುವ ಓರ್ವ ಕ್ರಿಕೆಟಿಗನ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

 

ಈ ಆಟಗಾರ ಆಸ್ಟ್ರೇಲಿಯ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ತಮ್ಮ ವೃತ್ತಿಜೀವನದ ಕೊನೆಯಲ್ಲಿ 224 ರನ್‌ಗಳ ಇನ್ನಿಂಗ್ಸ್ ಆಡಿದ್ದ ಈ ಆಟಗಾರ ಇಂದು ಒಂದು ಜೊತೆ ಚಪ್ಪಲಿ ಖರೀದಿಸಲೂ ಕೂಡ ದುಡ್ಡಿಲ್ಲದೆ ಪರದಾಡುವ ಸ್ಥಿತಿ ತಲುಪಿದ್ದಾರೆ.

 

ಆ ಆಟಗಾರ ಬೇರಾರು ಅಲ್ಲ, ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಲೌ ವಿನ್ಸೆಂಟ್. 2000 ರ ದಶಕದ ಉತ್ತರಾರ್ಧದಲ್ಲಿ ಈಗ ನಿಷ್ಕ್ರಿಯಗೊಂಡ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ಮ್ಯಾಚ್-ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದಿದ್ದ ವಿನ್ಸೆಂಟ್‌ ತಮ್ಮ ಬದುಕನ್ನೇ ಬರ್ಬಾದ್‌ ಮಾಡಿಕೊಂಡಿದ್ದಾರೆ.

 

ನ್ಯೂಜಿಲೆಂಡ್ ಪರ 23 ಟೆಸ್ಟ್ ಮತ್ತು 108 ಏಕದಿನ ಪಂದ್ಯಗಳನ್ನು ಆಡಿರುವ ವಿನ್ಸೆಂಟ್, 2014 ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ ಆಜೀವ ನಿಷೇಧಕ್ಕೊಳಗಾಗಿದ್ದರು. ಕಳೆದ ವರ್ಷ ನಿಷೇಧದ ವ್ಯಾಪ್ತಿಯನ್ನು ಕಡಿಮೆ ಮಾಡಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

 

ಈ 46 ವರ್ಷದ ಆಟಗಾರ, ಸ್ಟೀವ್ ವಾ ಅವರ ನಾಯಕತ್ವದಲ್ಲಿ 2000ರ ದಶಕದ ಬಲಿಷ್ಠ ತಂಡವಾದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಕೊನೆಯದಾಗಿ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 224 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆದರೂ, ಆ ನಂತರ ಖಿನ್ನತೆಗೆ ತುತ್ತಾಗಬೇಕಾಯಿತು. ಜೊತೆಗೆ ಮ್ಯಾಚ್ ಫಿಕ್ಸಿಂಗ್ ಜಗತ್ತಿಗೆ ಕಾಲಿಟ್ಟ ವಿನ್ಸೆಂಟ್‌ ಬದುಕು ದಾರವಿಲ್ಲದ ಗಾಳಿಪಟದಂತಾಗಿತ್ತು.

 

ಮ್ಯಾಚ್‌ ಫಿಕ್ಸಿಂಗ್‌ ಮಾಡಿರುವುದು ಖಚಿತ ಎಂದಾದ ಬಳಿಕ ವಿನ್ಸೆಂಟ್‌ ಅವರ ಅಂತರಾಷ್ಟ್ರೀಯ ವೃತ್ತಿಜೀವನವು 29 ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಕೊನೆಗೊಂಡಿತು. ವಿನ್ಸೆಂಟ್ ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಅವರ ವ್ಯಕ್ತಿತ್ವ ಮತ್ತು ವೃತ್ತಿಜೀವನದ ಮೇಲೆ ಫಿಕ್ಸಿಂಗ್‌ ಮಾಡಿರುವ ಘಟನೆ ಹೇಗೆ ಪ್ರಭಾವ ಬೀರಿತು ಎಂಬುದನ್ನು ವಿವರಿಸಿದ್ದಾರೆ.

 

"ವೃತ್ತಿಪರ ಆಟಗಾರನಾಗುವಷ್ಟು ಮಾನಸಿಕವಾಗಿ ನಾನು ಸದೃಢನಾಗಿರಲಿಲ್ಲ. ಹಾಗಾಗಿ 28 ನೇ ವಯಸ್ಸಿನಲ್ಲಿ ನಾನು ತೀವ್ರ ಖಿನ್ನತೆಗೆ ಒಳಗಾಗಿದ್ದೆ. ನಂತರ ನಾನು ಮ್ಯಾಚ್ ಫಿಕ್ಸಿಂಗ್ ಜಗತ್ತಿಗೆ ತಳ್ಳಲ್ಪಟ್ಟೆ. ನಾನು ಆ ಗ್ಯಾಂಗ್‌ನ ಭಾಗವಾಗಿದ್ದೆ. ಆಗ ನನಗೆ ಅನಿಸಿದ್ದು, ನಾನು ಒಳ್ಳೆಯವರ ಜೊತೆ ಇದ್ದೇನೆ ಎಂದು" ಅಂತ ಹೇಳಿದ್ದಾರೆ.

 

ವಿನ್ಸೆಂಟ್ ಅವರ ಕುಟುಂಬದ ಹಿನ್ನೆಲೆ ಉತ್ತಮವಾಗಿಲ್ಲದ ಕಾರಣ, ಯಾವಾಗಲೂ ಅವರ ಸುತ್ತ ಭಾವನಾತ್ಮಕ ಬೆಂಬಲವನ್ನು ಹುಡುಕುತ್ತಿದ್ದರು ಮತ್ತು ಅಂತಿಮವಾಗಿ ಅವರು ಭ್ರಷ್ಟಾಚಾರದ ಕೊಳಕು ಜಗತ್ತಿನಲ್ಲಿ ಆ ಬೆಂಬಲವನ್ನು ಕಂಡುಕೊಂಡರು.

 

"ನಾನು 12 ನೇ ವಯಸ್ಸಿನಿಂದ ಒಬ್ಬಂಟಿಯಾಗೇ ಬೆಳೆದೆ. ಆದರೆ ಆ ಬಳಿಕ ನಾನು ನನ್ನ ಪ್ರೀತಿಯನ್ನು ಕಂಡುಕೊಳ್ಳಲು ಬಯಸಿದ್ದೆ. ಆದ್ದರಿಂದ ಸುಲಭವಾಗಿ ದಾರಿ ತಪ್ಪಿದೆ" ಎಂದು ಹೇಳಿದ್ದಾರೆ. ಕೊನೆಗೂ ವಿನ್ಸೆಂಟ್ ಮ್ಯಾಚ್ ಫಿಕ್ಸಿಂಗ್ ಗ್ಯಾಂಗ್‌ನ ಭಾಗವಾಗುವುದರ ಅಪಾಯವನ್ನು ಅರಿತುಕೊಂಡು ಅದರಿಂದ ಹೊರಬಂದಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link