ದರ್ಶನ್ ಹೆಸರು ಹೇಳಿಕೊಂಡು ಪಬ್ಲಿಸಿಟಿ ತಗೊಳ್ಳೋ ಅವಶ್ಯಕತೆ ನಂಗಿಲ್ಲ: ನಟಿ ರಚಿತಾ ರಾಮ್
ನಟಿ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಮೂಲ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಬುಲ್ ಬುಲ್ʼ ಸಿನಿಮಾ. ಈ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿದ್ದ ರಚಿತಾ ರಾಮ್ ಅವರು ನಟ ದರ್ಶನ್ ಅವರನ್ನು ಯಾವತ್ತೂ ಮರೆತಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಅವರನ್ನ ಜೈಲಿಗೆ ಹೋಗಿ ಭೇಟಿ ಮಾಡಿದ್ದರು.
ಇದೀಗ ಜಾಮೀನಿನ ಮೇಲೆ ನಟ ದರ್ಶನ ಹೊರಬಂದಿದ್ದಾರೆ. ʼದಚ್ಚುʼ ಬಗ್ಗೆ ಹಾಗೂ ಅವರ ಸಹಾಯದ ಬಗ್ಗೆ ನಟಿ ರಚಿತಾ ರಾಮ್ ಮಾತನಾಡಿದ್ದಾರೆ. ʼನಾನು ಪ್ರತಿದಿನ ಮೇಕ್‌ಅಪ್ ಹಚ್ಚುವಾಗ ನಟ ದರ್ಶನ್ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಸುಮ್ಮನೇ ದರ್ಶನ್ ಹೆಸರು ಹೇಳಿಕೊಂಡು ಪಬ್ಲಿಸಿಟಿ ತಗೊಳ್ಳೋ ಅವಶ್ಯಕತೆ ನನಗಿಲ್ಲ. ಯಾಕಂದ್ರೆ ನಾನು ಅವರ ಬ್ಯಾನರ್‌ನಲ್ಲಿ ಬಂದ ಹುಡುಗಿ. ಅವರ ಬಗ್ಗೆ ಮತ್ತು ಅವರ ಬ್ಯಾನರ್ ಬಗ್ಗೆ ಮಾತನಾಡಲು ನನಗೆ 100% ಅಧಿಕಾರವಿದೆʼ ಎಂದು ಹೇಳಿದ್ದಾರೆ.
ʼನನ್ನ ತಂದೆ-ತಾಯಿ ಬಗ್ಗೆ ಮಾತನಾಡಲು ನಾನು ಏಕೆ ಬೇರೆಯವರ ಪರ್ಮಿಷನ್ ತೆಗೆದುಕೊಳ್ಳಬೇಕು. ನಾನು ಏಕೆ ಸುಮ್ಮಸುಮ್ಮನೇ ಮಾತನಾಡಬೇಕು. ನನಗೆ ದರ್ಶನ್ ಸರ್ ಬಗ್ಗೆಯಾಗಿರಬಹುದು.. ತೂಗುದೀಪ ಬ್ಯಾನರ್ ಬಗ್ಗೆ ಆಗಿರಬಹುದು ಮತ್ತು ನನ್ನ ʼಬುಲ್ ಬುಲ್ʼ ತಂಡವಾಗಿರಬಹುದು ಇವರೆಲ್ಲರ ಬಗ್ಗೆಯೂ ನನ್ನ ಉಸಿರು ಇರುವವರೆಗೂ ಮಾತನಾಡುವ ಅಧಿಕಾರವಿದೆ. ದರ್ಶನ್ ಅವರನ್ನ ನೆನಪಿಸಿಕೊಳ್ಳದ ದಿನವೇ ಇಲ್ಲ. ಅವರು ಕೊಟ್ಟ ಒಂದು ದೊಡ್ಡ ಗಿಫ್ಟ್‌ನಿಂದ ನನ್ನ ಸಿನಿಮಾ ಜೀವನ ಇಂದಿಗೂ ಸಾಗುತ್ತಿದೆʼ ಎಂದು ರಚಿತಾ ರಾಮ್ ಹೇಳಿದ್ದಾರೆ.
ನಟ ದರ್ಶನ್ ಅವರನ್ನು ನನ್ನ ಜೀವನದಲ್ಲಿ ಮರೆಯಲ್ಲ. ನಾನು ಇರುವಷ್ಟು ದಿನ ದರ್ಶನ್ ಅವರ ಪರ ನಿಲ್ಲುತ್ತೇನೆ, ನನ್ನ ಈ ಸಕ್ಸಸ್ ಫುಲ್ ಜೀವನಕ್ಕೆ ನಟ ದರ್ಶನ್ ಅವರೇ ಕಾರಣವೆಂದು ʼಬುಲ್ ಬುಲ್ʼ ಸುಂದರಿ ಹೇಳಿದ್ದಾರೆ.
ನನ್ನ ಸಿನಿಮಾ ಜೀವನ ತುಂಬಾ ಖುಷಿಯಿಂದ ಸಾಗುತ್ತಿದೆ. ನಾನು ದರ್ಶನ್, ʼಬುಲ್ ಬುಲ್ʼ ತಂಡ ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನಟಿ ರಚಿತಾ ರಾಮ್ ಕೃತಜ್ಞತೆ ಸಲ್ಲಿಸಿದ್ದಾರೆ.