Audi E-rickshaw: ಮುಂದಿನ ವರ್ಷ ಭಾರತೀಯ ರಸ್ತೆಗಿಳಿಯಲಿರುವ ಆಡಿ ಚಾಲಿತ ಇ-ರಿಕ್ಷಾಗಳು
ಸೆಕೆಂಡ್-ಲೈಫ್ ಬ್ಯಾಟರಿಗಳಿಂದ ಚಾಲಿತವಾದ ಇ-ರಿಕ್ಷಾಗಳು 2023ರ ಆರಂಭದಲ್ಲಿ ಪ್ರಾಯೋಗಿಕ ಯೋಜನೆಯಲ್ಲಿ ಮೊದಲ ಬಾರಿಗೆ ಭಾರತದ ರಸ್ತೆಗಳಿಗೆ ಇಳಿಸಲು ನಿರ್ಧರಿಸಲಾಗಿದೆ. ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ಇವುಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ. ನಿರ್ದಿಷ್ಟವಾಗಿ ಮಹಿಳೆಯರು ತಮ್ಮ ಸರಕುಗಳ ಮಾರಾಟಕ್ಕೆ ಮಧ್ಯವರ್ತಿಗಳ ಅಗತ್ಯವಿಲ್ಲದೆ ಮಾರುಕಟ್ಟೆಗೆ ಸಾಗಿಸಲು ಈ ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಳಸಲು ಸಾಧ್ಯವಾಗುತ್ತದೆ.
ಹೆಚ್ಚಿನ ಶಕ್ತಿ-ಸಾಂದ್ರತೆಯ ಬ್ಯಾಟರಿ ಮತ್ತು ಕಡಿಮೆ ತೂಕ ಹೊಂದಿರುವ ಈ ಇ-ರಿಕ್ಷಾಗಳು ಪರಿಸರ ಸ್ನೇಹಿಯಾಗಿರುತ್ತವೆ. ಈ ಎಲೆಕ್ಟ್ರಿಕ್ ಮೋಟಾರ್ ವಿಶೇಷವಾಗಿ ಶಕ್ತಿಯುತವಾಗಿರಬೇಕೆಂದೆನಿಲ್ಲ. ಏಕೆಂದರೆ ಭಾರತದಲ್ಲಿ ರಿಕ್ಷಾ ಚಾಲಕರು ವೇಗವಾಗಿ ಅಥವಾ ದೂರ ಪ್ರಯಾಣಿಸುವುದಿಲ್ಲ. ಈಗಾಗಲೇ ಭಾರತೀಯ ಮಾರುಕಟ್ಟೆಗೆ ವಿವಿಧ ಮಾದರಿಯ ಇ-ರಿಕ್ಷಾಗಳು ಪ್ರವೇಶಿಸಿವೆ. ಆಡಿಯ ಹಳೆ ಬ್ಯಾಟರಿಯಿಂದ ಚಾಲಿತವಾಗಿರುವ ಈ ಇ-ರಿಕ್ಷಾಗಳು ನೋಡಲು ಆಕರ್ಷಕ ಮತ್ತು ಬಹುಉಪಯೋಗಿ ಸಮಾರ್ಥ್ಯವನ್ನು ಹೊಂದಿವೆ.
ಈ ಇ-ರಿಕ್ಷಾಗಳನ್ನು ಸೌರ ಚಾರ್ಜಿಂಗ್ ಸ್ಟೇಷನ್‌ಗಳಿಂದ ವಿದ್ಯುತ್ ಬಳಸಿ ಚಾರ್ಜ್ ಮಾಡಲಾಗುತ್ತದೆ. ಸ್ಥಳೀಯ ಪಾಲುದಾರರ ಪ್ರದೇಶದಲ್ಲಿ ಸ್ಥಾಪಿಸಲಾದ ಚಾರ್ಜಿಂಗ್ ಸ್ಟೇಷನ್‍ಗಳಿಂದ ಇ-ರಿಕ್ಷಾಗಳನ್ನು ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಹಗಲಿನಲ್ಲಿ ಸೂರ್ಯನ ಬೆಳಕು ಇ-ಟ್ರಾನ್ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಇದು ಬಫರ್ ಶೇಖರಣಾ ಘಟಕವಾಗಿ ಕಾರ್ಯನಿರ್ವಹಿಸಲಿದ್ದು, ಸಂಜೆ ರಿಕ್ಷಾಗಳಿಗೆ ವಿದ್ಯುತ್ ರವಾನಿಸಲಾಗುತ್ತದೆ.
ಈ ಇ-ರಿಕ್ಷಾಗಳ ಬ್ಯಾಟರಿಯನ್ನು ಈ ಮೊದಲೇ ಹೇಳಿದಂತೆ ಆಡಿ ಕಾರುಗಳಲ್ಲಿ ಬಳಕೆ ಮಾಡಲಾಗಿರುತ್ತದೆ. ಇ-ರಿಕ್ಷಾಗಳಲ್ಲಿ ಬ್ಯಾಟರಿಯ ಮರುಬಳಕೆ ಬಳಿಕವೂ ಅದು ಉಪಯೋಗಕ್ಕೆ ಬರಲಿದೆ. 3ನೇ ಹಂತದಲ್ಲಿ ಬ್ಯಾಟರಿಗಳ ಉಳಿದ ಶಕ್ತಿಯನ್ನು LED ಲೈಟಿಂಗ್‌ನಂತಹ ಸ್ಥಾಯಿ ಅಪ್ಲಿಕೇಶನ್‌ಗಳಲ್ಲಿ ಬಳಸಬಹುದಾಗಿದೆ.