ಈ ಐದು ಬಿಳಿ ಆಹಾರಗಳಿಂದ ಹೆಚ್ಚಾಗುತ್ತೆ ಮಧುಮೇಹ, ಬೊಜ್ಜಿನ ಅಪಾಯ!
ಆಹಾರದ ರುಚಿಯನ್ನು ಹೆಚ್ಚಿಸುವ ತರಕಾರಿಗಳ ರಾಜ ಆಲೂಗಡ್ಡೆ. ಆಲೂಗಡ್ಡೆ ಎಂದರೆ ನಮ್ಮಲ್ಲಿ ಹಲವರಿಗೆ ಪ್ರಾಣ. ಆದರೆ, ಬಿಳಿ ಆಲೂಗಡ್ಡೆಯಲ್ಲಿ ಪಿಷ್ಟ ಮತ್ತು ಕಾರ್ಬ್ ಹೆಚ್ಚಾಗಿ ಕಂಡು ಬರುತ್ತದೆ. ಇದರ ಅತಿಯಾದ ಸೇವನೆಯು ಮಧುಮೇಹದ ಅಪಾಯವನ್ನೂ ಕೂಡ ಹೆಚ್ಚಿಸುತ್ತದೆ.
ಉಪ್ಪಿಲ್ಲದ ಊಟ ರುಚಿ ಎಂದೆನಿಸುವುದಿಲ್ಲ. ಆದರೆ, ಅತಿಯಾದ ಉಪ್ಪಿನ ಸೇವನೆಯು ದೇಹದಲ್ಲಿನ ನೀರಿನ ಪ್ರಮಾಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸುವುದರ ಜೊತೆಗೆ ರಕ್ತ ನಾಳಗಳನ್ನು ಕೂಡ ಹಾನಿಗೊಳಿಸುತ್ತದೆ. ಮೂಳೆಗಳು ದುರ್ಬಲವಾಗುತ್ತವೆ ಮತ್ತು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೂ ಕಾರಣವಾಗುತ್ತದೆ.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸಿಹಿ ಎಂದೊಡನೆ ಬಾಯಲ್ಲಿ ನೀರೂರುತ್ತೆ. ಆದರೆ, ಸಂಸ್ಕರಿಸಿದ ಸಕ್ಕರೆ ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಮೈದಾ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳು ಉದರ ಸಮಸ್ಯೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಬೊಜ್ಜು, ಮಧುಮೇಹಕ್ಕೂ ಕಾರಣವಾಗಬಹುದು. ವಾಸ್ತವವಾಗಿ, ಗೋಧಿ ಹಿಟ್ಟನ್ನು ಸಂಸ್ಕರಿಸಿ ಮೈದಾ ಹಿಟ್ಟನ್ನು ತಯಾರಿಸಲಾಗುತ್ತದೆ. ಗೋಧಿ ಹಿಟ್ಟನ್ನು ಸಂಸ್ಕರಿಸಿದಾಗ, ಈ ಪ್ರಕ್ರಿಯೆಯಲ್ಲಿ ಫೈಬರ್, ಉತ್ತಮ ಕೊಬ್ಬು, ಜೀವಸತ್ವಗಳು, ಖನಿಜಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳ ಧಾನ್ಯಗಳನ್ನು ತೆಗೆದುಹಾಕಲಾಗುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರು ಮೊದಲು ರೈಸ್/ಅಕ್ಕಿ ಸೇವನೆಯನ್ನು ತಪ್ಪಿಸುತ್ತಾರೆ. ವಾಸ್ತವವಾಗಿ, ವೈಟ್ ರೈಸ್ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಸಿಪ್ಪೆ ಮತ್ತು ಸೂಕ್ಷ್ಮಾಣುಗಳನ್ನು ತೆಗೆದುಹಾಕುವ ಮೂಲಕ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಹಾಗಾಗಿಯೇ, ವೈಟ್ ರೈಸ್ ಸೇವನೆಯಿಂದ ಟೈಪ್-2 ಮಧುಮೇಹ ಬರುವ ಅಪಾಯವಿದೆ. ಇದರೊಂದಿಗೆ ತೂಕವೂ ಹೆಚ್ಚುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.