ಗಾಂಧೀ ವಿಚಾರಧಾರೆಯ ಪ್ರತೀಕ ಈ ಹೊಸರಿತ್ತಿಯ ಗುರುಕುಲ ಶಾಲೆ..!
ಇಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯು ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ರಾಜ್ಯ ಪಠ್ಯಕ್ರಮದ ಜೊತೆಗೆ ಗಾಂಧೀ ವಿಚಾರಧಾರೆಯ ಅನುಸಾರ ಕೃಷಿ, ನೂಲು ಮತ್ತು ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ ಮುಂತಾದ ಸ್ವಾವಲಂಬಿ, ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಇಲ್ಲಿನ ವಿದ್ಯಾರ್ಥಿಗಳು ತಾವೇ ನೇಯ್ದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ಬೆಳೆದ ಕೃಷಿ ಬೆಳೆಗಳಿಂದ ತಯಾರಿಸಿದ ಆಹಾರ ಸೇವಿಸುತ್ತಾರೆ.ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ.
ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 5 ರಿಂದ 10 ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ.ಸಮಾಜದ ಎಲ್ಲಾ ವರ್ಗಗಳು ಸೇರಿದಂತೆ ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.