ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾ
ಇತ್ತೀಚೆಗೆ 'ರಾಜೇಶ್ ಗೌಡ' ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್’ನಲ್ಲಿ ಮಾತನಾಡಿದ್ದ ಪ್ರೇಮಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವೃತ್ತಿಬದುಕು ಯಶಸ್ಸಿನ ಹಾದಿಯಲ್ಲಿರುವಾಗಲೇ ಜೀವನ್ ಅಪ್ಪಚ್ಚು ಎಂಬವರ ಜೊತೆ ಪ್ರೇಮ ವಿವಾಹವಾದರು. ಆದರೆ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಮಾತನಾಡಿದ ಪ್ರೇಮ, ತಮ್ಮ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.
“ಜೀವನ್ ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆ ಮಾಡಿಕೊಳ್ಳುತ್ತೀನಿ ಎಂದು ಮನೆಯವರ ಬಳಿ ಹೇಳಿದರು. ನಮ್ಮ ಮನೆಗೆ ಅವರ ಮನೆ ಹತ್ತಿರ ಇತ್ತು ಎಂಬ ಕಾರಣಕ್ಕೆ ಮದುವೆಗೆ ಒಪ್ಪಿಕೊಂಡೆ” ಎಂದರು.
"ಮದುವೆ ಜೀವನದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಗಳಿದ್ದವು. ನನ್ನ ಗಂಡ ಹೀಗಿರಬೇಕು, ಹಾಗಿರಬೇಕು ಎಂಬೆಲ್ಲಾ ನಿರೀಕ್ಷೆಗಳಿದ್ದವು. ಆದರೆ ನನ್ನ ಮದುವೆ ನಿರ್ಧಾರ ಸರಿ ಇರಲಿಲ್ಲ ಎನಿಸುತ್ತದೆ. ಆತುರದಲ್ಲಿ ನಿರ್ಧಾರಕ್ಕೆ ಬಂದೆ ಎನಿಸಿತು” ಎಂದಿದ್ದಾರೆ.
“ಮದುವೆ ಅನ್ನೋದು ಕಮೀಟ್‌ಮೆಂಟ್. ಜವಾಬ್ದಾರಿ. ಇಬ್ಬರದ್ದು ಸರಿ ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಆದರೆ ನನಗೆ ಮದುವೆ ಬಳಿಕ ಸ್ವಾತಂತ್ರ ಇರಲಿಲ್ಲ ಅನಿಸಿತು. ನನ್ನ ಅನುಭವ ನೋಡಿದ ಮೇಲೆ, ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳುವುದು ಒಂದೇ… ಸಮಯ ತೆಗೆದುಕೊಂಡು ಯೋಚಿಸಿ. ತಕ್ಷಣ ನಿರ್ಧಾರಕ್ಕೆ ಬರಬೇಡಿ" ಎಂದು ಹೇಳಿದ್ದಾರೆ.
"ಡಿವೋರ್ಸ್ ಬಗ್ಗೆ ತಂದೆ-ತಾಯಿಗೆ ಹೇಳೋದು ಬಹಳ ಕಷ್ಟ ಅನಿಸಿತ್ತು. ಆದರೆ ವಿಷಯ ತಿಳಿದ ಬಳಿಕ ಎಲ್ಲರೂ ಬೆಂಬಲವಾಗಿ ನಿಂತರು." ಎಂದು ವಿವರಿಸಿದ್ದಾರೆ.