ಟೆಸ್ಟ್ ಕ್ರಿಕೆಟ್ʼನಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗದ ಭಾರತದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?
ಟೆಸ್ಟ್ ಕ್ರಿಕೆಟ್ ಎಂಬುದು ಸುದೀರ್ಘ ಕ್ರಿಕೆಟ್ ಸ್ವರೂಪ. ಈ ಪಂದ್ಯವನ್ನಾಡಲು ಸಾಮಾರ್ಥ್ಯಕ್ಕಿಂತ ಹೆಚ್ಚಾಗಿ ತಾಳ್ಮೆಯೂ ಬೇಕಾಗುತ್ತದೆ. ಅಂತಹ ಕ್ರಿಕೆಟ್ ಸ್ವರೂಪದಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗದೆ ಉಳಿದ ವಿಶ್ವದ ನಾಲ್ವರು ಕ್ರಿಕೆಟಿಗರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಅದರಲ್ಲಿ ಓರ್ವ ಭಾರತೀಯ ಆಟಗಾರ. ಇವರೆಲ್ಲರ ಬಗ್ಗೆ ಮುಂದೆ ತಿಳಿಯೋಣ.
ಇಜಾಜ್ ಚೀಮಾ: ಇವರು ತಮ್ಮ 31 ನೇ ವಯಸ್ಸಿನಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಟೆಸ್ಟ್ʼಗೆ ಪಾದಾರ್ಪಣೆ ಮಾಡಿದರು. ಸೆಪ್ಟೆಂಬರ್ 2011 ಮತ್ತು ಜೂನ್ 2012 ರ ನಡುವೆ, ಅವರು ಪಾಕಿಸ್ತಾನಕ್ಕಾಗಿ 7 ಪಂದ್ಯಗಳನ್ನು ಆಡಿದ್ದು, ಐದು ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದರು. ಈ 5 ಬಾರಿಯೂ ಸಹ ಔಟ್ ಆಗದೆ ಉಳಿದಿದ್ದರು. ಚೀಮಾ ಅವರು ಗರಿಷ್ಠ ಸಂಖ್ಯೆಯ ಇನ್ನಿಂಗ್ಸ್ʼಗಳಲ್ಲಿ ಔಟಾಗದೆ ಉಳಿದ ಕಾರಣ ಟೆಸ್ಟ್ ಕ್ರಿಕೆಟ್ʼನಲ್ಲಿ ನಾಟೌಟ್ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅಫಾಕ್ ಹುಸೇನ್: ಬಲಗೈ ಆಫ್-ಬ್ರೇಕ್ ಬೌಲರ್ ಮತ್ತು ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಅಫಾಕ್ ಹುಸೇನ್ ಕೂಡ ತಮ್ಮ ಅಂತರಾಷ್ಟ್ರೀಯ ಟೆಸ್ಟ್ ವೃತ್ತಿಜೀವನದಲ್ಲಿ ಒಂದು ಬಾರಿಯೂ ಔಟ್ ಆಗಿಲ್ಲ.
ಜಾನ್ ಚೈಲ್ಡ್ಸ್: ಜಾನ್ ಚೈಲ್ಡ್ಸ್ ತಮ್ಮ 36 ವರ್ಷ ಮತ್ತು 320 ದಿನಗಳ ವಯಸ್ಸಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಚೈಲ್ಡ್ಸ್ 86 ಓವರ್ʼಗಳಲ್ಲಿ ಕೇವಲ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ, ನಾಲ್ಕು ಇನ್ನಿಂಗ್ಸ್ʼಗಳನ್ನಾಡಿದ್ದು ಅದರಲ್ಲಿ ಔಟಾಗದೆ ಉಳಿದಿದ್ದಾರೆ.
ಟಿನು ಯೋಹಾನನ್: ಇವರು ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ ಕೇರಳದ ಮೊದಲ ಕ್ರಿಕೆಟಿಗ. ಯೋಹಾನನ್ ಡಿಸೆಂಬರ್ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಸ್ಮರಣೀಯ ಟೆಸ್ಟ್ ಪಾದಾರ್ಪಣೆ ಮಾಡಿದರು. ಆಂಗ್ಲರ ಆರಂಭಿಕ ಆಟಗಾರರಿಬ್ಬರನ್ನೂ ಔಟ್ ಮಾಡಿದ ಅವರು ಒಟ್ಟು 4 ವಿಕೆಟ್ ಪಡೆದರು. ಇದಲ್ಲದೆ, ಮೂರು ಪಂದ್ಯಗಳಲ್ಲಿ 51.20 ಸರಾಸರಿಯಲ್ಲಿ ಒಟ್ಟು ಆರು ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಈ ಮೂರು ಪಂದ್ಯಗಳಲ್ಲಿ, ಯೋಹಾನನ್ ನಾಲ್ಕು ಬಾರಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದರು. ಆ ನಾಲ್ಕು ಇನ್ನಿಂಗ್ಸ್ʼಗಳಲ್ಲಿ ಔಟಾಗದೆ ಉಳಿದರು.