Tokyo 2020 Olympics: ಪದಕ ಗೆಲ್ಲುವ ಭರವಸೆ ಮೂಡಿಸಿರುವ ಭಾರತೀಯ ಕ್ರೀಡಾಪಟುಗಳಿವರು...
ಕಳೆದ ತಿಂಗಳು ಪ್ಯಾರಿಸ್‌ನಲ್ಲಿ ನಡೆದ ಬಿಲ್ಲುಗಾರಿಕೆ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ 3 ಚಿನ್ನ ಗೆದ್ದಿರುವ ದೀಪಿಕಾ ಕುಮಾರಿ ಟೋಕಿಯೊದಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ದೀಪಿಕಾ ಕುಮಾರಿ ವಿವಿಧ ವಿಶ್ವಕಪ್‌ಗಳಲ್ಲಿ 9 ಚಿನ್ನ, 12 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದೀಗ ಒಲಿಂಪಿಕ್ ಪದಕವನ್ನು ತಮ್ಮ ಮುಡಿಗೇರಿಸಿಕೊಳ್ಳಲು ಸಜ್ಜಾಗಿದ್ದಾರೆ.
ದೊಡ್ಡ ವೇದಿಕೆಯಲ್ಲಿ ಮೀರಾಬಾಯಿ ಚಾನುಗೆ ಅವಕಾಶ ಸಿಕ್ಕಿರುವುದು ಇದು 2ನೇ ಬಾರಿ. 2016 ರಲ್ಲಿ ಅವರು ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು. ಆದರೆ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 3 ಪ್ರಯತ್ನಗಳಲ್ಲಿ ಸರಿಯಾದ ಲಿಫ್ಟ್ ದಾಖಲಿಸುವಲ್ಲಿ ವಿಫಲರಾಗಿದ್ದರು. ವೇಟ್‌ಲಿಫ್ಟಿಂಗ್ ನಲ್ಲಿ ಅನೇಕ ಸಾಧನೆ ಮಾಡಿರುವ ಮೀರಾಬಾಯಿ ಭಾರತಕ್ಕೆ ಈ ಬಾರಿ ಪದಕ ತಂದುಕೊಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಗಾಯದಿಂದಾಗಿ 2016ರ ರಿಯೋ ಒಲಿಂಪಿಕ್ಸ್ ನಿಂದ ವಿನೇಶ್ ಫೋಗಾಟ್ ಹೊರಗುಳಿಯಬೇಕಾಗಿತ್ತು. ಈ ಬಾರಿ ಅವರು ಮಹಿಳಾ ಕುಸ್ತಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 26ರ ಹರೆಯದ ಫೋಗಾಟ್ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಫೋಗಾಟ್ ಮಾತ್ರವಲ್ಲದೆ 65 ಕೆಜಿ ಪುರುಷರ ವಿಭಾಗದಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ ಅವರು ಕೂಡ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.
ಮ್ಯಾಗ್ನಿಫಿಸೆಂಟ್ ಮೇರಿ, ಐರನ್ ಲೇಡಿ ಎಂದು ಖ್ಯಾತಿಯಾಗಿರುವ ಎಂ.ಸಿ.ಮೇರಿಕೋಮ್ ಈ ಬಾರಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುತ್ತಾರೆಂಬ ಭರವಸೆ ಇಟ್ಟುಕೊಳ್ಳಲಾಗಿದೆ. 2012ರ ಲಂಡನ್ ಒಲಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದ ಮೇರಿಕೋಮ್ ಫ್ಲೈವೈಟ್ ವಿಭಾಗದಲ್ಲಿ (51 ಕೆಜಿ) ಸ್ಪರ್ಧಿಸಲಿದ್ದಾರೆ. ಇದು ಮೇರಿಕೋಮ್ ಅವರು ಭಾಗವಹಿಸುತ್ತಿರುವ ಕೊನೆಯ ಒಲಂಪಿಕ್ಸ್ ಕ್ರೀಟಾಕೂಟವಾಗಿದೆ.
ಈ ಬಾರಿ ಶೂಟಿಂಗ್ ನಲ್ಲಿ 15 ಸದಸ್ಯರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪದಕದ ಭರವಸೆ ಹೆಚ್ಚಾಗಿದೆ. ಶೂಟಿಂಗ್ ಸ್ಪರ್ಧೆಗಳಲ್ಲಿ 19 ವರ್ಷದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರ ಮೇಲೆ ಹೆಚ್ಚಿನ ಭರವಸೆಯನ್ನು ಇಟ್ಟುಕೊಳ್ಳಲಾಗಿದೆ. ಈ ಹಿಂದೆ ನಡೆದ ಶೂಟಿಂಗ್ ಸ್ಪರ್ಧೆಗಳಲ್ಲಿ ಈ ಇಬ್ಬರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ನಂತರ 21 ವರ್ಷದ ಪಿ.ವಿ.ಸಿಂಧು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಯುವ ಶಟ್ಲರ್ ಈ ಬಾರಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುತ್ತಾರೆಂಬ ನಂಬಿಕೆ ಇದೆ. 2019ರಲ್ಲಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಈ ಬಾರಿ ಸ್ವರ್ಣ ಸಿಂಧೂರ ಗ್ಯಾರಂಟಿ ಎಂದು ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.