ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮ
ದಿನೇ ದಿನೇ ಹೆಚ್ಚಾಗುತ್ತಿರುವ ಫೇಕ್ ಕಾಲ್, ಫ್ರಾಡ್ ಕಾಲ್ಸ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೆಲಿಕಾಂ ನಿಯಂತ್ರಕ TRAI ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ಕುರಿತಂತೆ ಇತ್ತೀಚೆಗಷ್ಟೇ (ಆಗಸ್ಟ್ 13) ನಿರ್ದೇಶನ ನೀಡಿರುವ ಟೆಲಿಕಾಂ ನಿಯಂತ್ರಕ TRAI, ಅನಪೇಕ್ಷಿತ (ಸ್ಪ್ಯಾಮ್) ಕರೆಗಳನ್ನು ಮಾಡುವ ನೋಂದಾಯಿತ ಟೆಲಿಮಾರ್ಕೆಟಿಂಗ್ ಕಂಪನಿಗಳ ಎಲ್ಲಾ ಟೆಲಿಕಾಂ ಸಂಪನ್ಮೂಲಗಳನ್ನು ಕಡಿತಗೊಳಿಸುವಂತೆ ಮತ್ತು ಅವುಗಳನ್ನು ಎರಡು ವರ್ಷಗಳವರೆಗೆ ಕಪ್ಪುಪಟ್ಟಿಗೆ ಸೇರಿಸುವಂತೆ ತಿಳಿಸಿದೆ.
ಸ್ಪ್ಯಾಮ್, ಫೇಕ್ ಕಾಲ್ ಸಂಬಂಧಿಸಿದಂತೆ TRAI ಹೊಸ ನಿಯಮ ಇದೆ 01ನೇ ಸೆಪ್ಟೆಂಬರ್ 2024ರಿಂದ ಜಾರಿಯಾಗಲಿದೆ. ಇದರನ್ವಯ ಇನ್ನು ಮುಂದೆ ಜಾಹೀರಾತು ಸೇರಿದಂತೆ ಗ್ರಾಹಕರಿಗೆ ಪದೇ ಪದೇ ಕರೆ ಮಾಡುವಂತೆಯಿಲ್ಲ. ಇಂತಹ ನಕಲಿ ಕರೆಗಳಿಗೆ ಕಡಿವಾಣ ಹಾಕಲು ಟ್ರಾಯ್ ಸೂಚಿಸಿದೆ.
TRAI ಹೊಸ ನಿಯಮದನ್ವಯ, "ಸ್ಪಾಮ್ ಕರೆಗಳನ್ನು ಮಾಡುವ ನೋಂದಾಯಿತ ಟೆಲಿಮಾರ್ಕೆಟಿಂಗ್ ಕಂಪನಿಗಳ ಎಲ್ಲಾ ಟೆಲಿಕಾಂ ಚಾನೆಲ್‌ಗಳನ್ನು ಸಂಪರ್ಕ ಕಡಿತಗೊಳಿಸುವಂತೆ ಟೆಲಿಕಾಂ ಸೇವಾ ಪೂರೈಕೆದಾರರಿಗೆ ನಿರ್ದೇಶಿಸಲಾಗಿದೆ ಮತ್ತು ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಗ್ರಾಹಕ ಆದ್ಯತೆಯ ನಿಯಮಗಳು, 2018 ರ ಅಡಿಯಲ್ಲಿ ಅಂತಹ ಕರೆಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ" ಎಂದು TRAI ಹೇಳಿಕೆಯಲ್ಲಿ ತಿಳಿಸಿದೆ.
ನಕಲಿ ಕರೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನೆರವು ಪಡೆಯಲು ಸೂಚಿಸಿರುವ ಟೆಲಿಕಾಂ ನಿಯಂತ್ರಕ TRAI, ಇದರ ಹೊರತಾಗಿಯೂ ಫೇಕ್ ಕಾಲ್ ಸಮಸ್ಯೆ ಬಗೆಹರಿಯದಿದ್ದರೆ ಟೆಲಿಕಾಂ ಆಪರೇಟರ್, ಫೇಕ್ ಕಾಲ್ ಮಾಡಿದ ಸಂಸ್ಥೆ/ವ್ಯಕ್ತಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಕಾಂ ಕಂಪನಿಗಳಿಗೆ ಈ ಸೂಚನೆಯನ್ನು ತಕ್ಷಣ ಅನುಸರಿಸಲು ಮತ್ತು ಈ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಹದಿನೈದು ದಿನಗಳಿಗೊಮ್ಮೆ ನಿಯಮಿತ ವಿವರಗಳನ್ನು ನೀಡುವಂತೆ ಕೇಳಿದೆ.
TRAIನ ಈ ಕ್ರಮದಿಂದ 'ನಿರ್ಣಾಯಕ ಕ್ರಮ' ನೋಂದಾಯಿತ ಟೆಲಿಮಾರ್ಕೆಟಿಂಗ್ ಕಂಪನಿಗಳಿಂದ ಗ್ರಾಹಕರಿಗೆ ಮಾಡುವ ಸ್ಪ್ಯಾಮ್ ಕರೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಗ್ರಾಹಕರಿಗೆ ಇದರಿಂದ ಪರಿಹಾರ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.
TRAI ಹೊಸ ನಿಯಮದ ಪ್ರಕಾರ, ಯಾವುದೇ ರೀತಿ ಫ್ರಾಡ್ ಅಥವಾ ಫೇಕ್ ಕಾಲ್ ಕುರಿತು ಗ್ರಾಹಕರು ದೂರು ನೀಡಬಹುದಾಗಿದ್ದು, ಇಂತಹ ಸಂಖ್ಯೆಗಳನ್ನು ಎರಡು ವರ್ಷಗಳವರೆಗೆ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು.
ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಸ್ಪ್ಯಾಮ್ ಕರೆಗಳಿಂದಾಗಿ ಮೋಸ ಹೋಗುತ್ತಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಹೆಚ್ಚು ದೂರುಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.