Tulsi health benefits: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
ತುಳಸಿ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತುಳಸಿ ಸೇವನೆಯಿಂದ ನೀವು ಹಲವಾರು ಖಾಯಿಲೆಗಳಿಂದ ದೂರವಿರಬಹುದು. ಮಕ್ಕಳಲ್ಲಿ ಕಾಣಿಸುವ ಶೀತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ಸಮಸ್ಯೆಗಳಿಗೆ ತುಳಸಿ ರಾಮಬಾಣವಾಗಿದೆ. ಜೇನುತುಪ್ಪದೊಂದಿಗೆ ತುಳಸಿ ಸೇವಿಸಿದರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಒಂದು ಚಮಚ ತುಳಸಿ ಎಲೆಯ ಪುಡಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದ್ರೆ ಅದ್ಭುತ ಚಮತ್ಕಾರವನ್ನು ನೀವೇ ಕಾರಣಬಹುದು.
ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಎಳೆ ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಬೇಕು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಮತ್ತು ಒತ್ತಡದಂತಹ ಕಾಯಿಲೆಗಳಿಂದ ನಿಮಗೆ ಮುಕ್ತಿ ನೀಡುತ್ತದೆ. ತುಳಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ.
ತುಳಸಿ ಉತ್ತಮ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಆ್ಯಂಟಿ ಬ್ಯಾಕ್ಟೀರಿಯಾ ಗುಣಲಕ್ಷಣ ಹೊಂದಿದೆ. ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಇದು ನಿಮಗೆ ಸಹಕಾರಿಯಾಗಿದೆ. ತುಳಸಿಯನ್ನು ಟೀ ಜೊತೆಗೆ ಸೇವಿಸಿಬಹುದು. ಹರ್ಬಲ್ ಟೀ ಅಥವಾ ಹಾಲಿನಿಂದ ತಯಾರಿಸುವ ಚಹಾದಲ್ಲಿ ತುಳಸಿ ಎಲೆಗಳನ್ನು ಸೇರಿಸಬಹುದು. ಒಂದು ಕಪ್ ನೀರಿಗೆ ಚಹಾ ಎಲೆಗಳನ್ನು ಹಾಕಿ, ನಂತರ ಅದಕ್ಕೆ 6-7 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಸೋಸಿ ಸೇವಿಸಬೇಕು.
ತುಳಸಿ ರಸವು ಗಂಟಲು ನೋವಿನಿಂದ ಹಿಡಿದು ಹೊಟ್ಟೆ ನೋವಿನವರೆಗಿನ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. 10-15 ತುಳಸಿ ಎಲೆಗಳನ್ನು ತೆಗೆದುಕೊಂಡು ಜಜ್ಜಿ ಅದರ ರಸವನ್ನು ತೆಗೆಯಿರಿ. ಆ ರಸವನ್ನು ಒಂದು ಕಪ್ ನೀರಿಗೆ ಬೆರೆಸಿ ಸೇವಿಸಿರಿ. ಇದು ಹೊಟ್ಟೆಯ ತೊಂದರೆಗಳನ್ನು ದೂರಮಾಡುತ್ತದೆ ಮತ್ತು ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.
ತುಳಸಿ ಎಲೆಯನ್ನು ಒಣಗಿಸಿ ನಂತರ ಪುಡಿ ಮಾಡಬೇಕು. ಅದನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ. ತುಳಸಿ ಕಷಾಯವನ್ನು ಈ ರೀತಿ ತಯಾರಿಸಬೇಕು. ಇದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ.