Urine Colours: ಮೂತ್ರದ ಬಣ್ಣದಿಂದ ತಿಳಿಯಿರಿ ನಿಮ್ಮ ಆರೋಗ್ಯದ ಸ್ಥಿತಿ
ಯಾರೇ ಆದರೂ ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ರಕ್ತ ಪರೀಕ್ಷೆಯ ಜೊತೆಗೆ ಮೂತ್ರದ ಪರೀಕ್ಷೆಯನ್ನೂ ಕೂಡ ಶಿಫಾರಸ್ಸು ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ, ಮೂತ್ರದ ಮೂಲಕ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ತಿಳಿಯಬಹುದು. ಮೂತ್ರದ ಬಣ್ಣವು ಸಾಮಾನ್ಯಕ್ಕಿಂತ ಬದಲಾದರೆ ಅದು ವಿಭಿನ್ನ ಅರ್ಥವನ್ನು ಹೊಂದಿರುತ್ತದೆ. ಹಾಗಿದ್ದರೆ, ಯಾವ ಬಣ್ಣದ ಮೂತ್ರ ಏನನ್ನು ಅರ್ಥೈಸುತ್ತದೆ ಎಂದು ತಿಳಿಯೋಣ...
ಕೆಂಪು ಅಥವಾ ಗುಲಾಬಿ ಬಣ್ಣದ ಮೂತ್ರ: ಸಾಮಾನ್ಯವಾಗಿ ಬೀಟ್ರೂಟ್ ಅಥವಾ ಬೆರ್ರಿ ಹಣ್ಣುಗಳನ್ನು ತಿನ್ನುತ್ತಿದ್ದರೆ ಮೂತ್ರದ ಬಣ್ಣ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಇರಬಹುದು. ಆದರೆ, ಇವುಗಳನ್ನು ತಿನ್ನದಿದ್ದರೂ ಮೂತ್ರದ ಬಣ್ಣ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಕಂಡು ಬಂದರೆ ಇದು ಕ್ಯಾನ್ಸರ್, ಮೂತ್ರಪಿಂಡದ ಸಮಸ್ಯೆ ಅಥವಾ ಪ್ರಾಸ್ಟೇಟ್‌ನಂತಹ ಸಮಸ್ಯೆಗಳ ಸಂಕೇತವಾಗಿರಬಹುದು ಎನ್ನಲಾಗುತ್ತದೆ.
ಗಾಢ ಕಂದು ಅಥವಾ ಚಹಾ ಬಣ್ಣದ ಮೂತ್ರ: ಸಾಮಾನ್ಯವಾಗಿ ಅಗತ್ಯಕ್ಕಿಂತ ಕಡಿಮೆ ನೀರು ಕುಡಿಯುವವರಲ್ಲಿ ಮೂತ್ರವು ಗಾಢ ಕಂದು ಅಥವಾ ಚಹಾ ಬಣ್ಣದಲ್ಲಿ ಕಂಡು ಬರುತ್ತದೆ. ಒಂದೊಮ್ಮೆ ನೀವು ಸರಿಯಾಗಿ ನೀರು ಕುಡಿಯುತ್ತಿದ್ದರೂ ಮೂತ್ರದ ಬಣ್ಣ ಬದಲಾಗದಿದ್ದರೆ ಇದು ಲಿವರ್ ಅಥವಾ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಹೊಂದಿರುವುದನ್ನು ಸೂಚಿಸುತ್ತದೆ.
ಹಸಿರು ಬಣ್ಣದ ಮೂತ್ರ: ಹಸಿರು ಬಣ್ಣದ ಮೂತ್ರ ಅಪರೂಪವಾಗಿ ಕಂಡು ಬರುತ್ತದೆ. ಆದರೂ, ಈ ಬಣ್ಣದ ಮೂತ್ರ ಕಂಡು ಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದನ್ನು ಪರಿಗಣಿಸಿ.
ಹಳದಿ ಬಣ್ಣದ ಮೂತ್ರ: ಸಾಮಾನ್ಯವಾಗಿ ಗಾಢ ಹಳದಿ ಬಣ್ಣದ ಮೂತ್ರವು ಕಾಮಾಲೆ ರೋಗವನ್ನು ಸಂಕೇತಿಸುತ್ತದೆ. ಆದರೂ, ನಿಮ್ಮ ಆಹಾರ ಪೂರಕಗಳು ಮೂತ್ರದ ಬಣ್ಣವನ್ನು ನಿರ್ಧರಿಸಬಹುದಾದ್ದರಿಂದ ಹೆಚ್ಚಿನ ಭಯ ಪಡುವ ಅಗತ್ಯವಿಲ್ಲ. ಆದರೆ, ವಾರಗಟ್ಟಲೆ ಇದೇ ಬಣ್ಣದ ಮೂತ್ರ ಕಂಡು ಬಂದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.
ಬೂದು ಬಣ್ಣದ ಮೂತ್ರ: ಸಾಮಾನ್ಯವಾಗಿ ವೀರ್ಯವು ಮೂತ್ರದೊಂದಿಗೆ ಬೆರೆತಾಗ ಮೂತ್ರವು ಬೂದು ಬಣ್ಣದಲ್ಲಿ ಕಂಡು ಬರಬಹುದು. ಆದರೆ, ದೀರ್ಘ ಸಮಯದವರೆಗೆ ನಿಮ್ಮ ಮೂತ್ರವು ಇದೇ ಬಣ್ಣದಲ್ಲಿ ಕಂಡು ಬರುತ್ತಿದ್ದರೆ ಇದು ಗಂಭೀರವಾದ ಸೋಂಕನ್ನು ಸೂಚಿಸುತ್ತದೆ. ಮಾತ್ರವಲ್ಲ, ಇದು ಕಿಡ್ನಿ ಸಂಬಂಧಿತ ಸಮಸ್ಯೆಯಿಂದಲೂ ಇರಬಹುದು. ಹಾಗಾಗಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.