Vastu Tips: ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ & ಲಾಭ?
ಗೋಡೆಯಲ್ಲಿ ನೇತು ಹಾಕುವ ಗಡಿಯಾರ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ನಂಬಲಾಗಿದೆ. ಅದರ ಸರಿಯಾದ ದಿಕ್ಕು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ. ವಾಸ್ತು ನಿಯಮದ ಪ್ರಕಾರ ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇಡಬಾರದು, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತು ಹಾಕುವುದು ಶುಭವೆಂದು ನಂಬಲಾಗಿದೆ. ಇದು ಸಂಪತ್ತು ಹಾಗೂ ಸಮೃದ್ಧಿಗೆ ಮುನ್ನುಡಿ ಬರೆಯುತ್ತದೆ ಎಂದು ಹೇಳಲಾಗಿದೆ. ಉತ್ತರ ದಿಕ್ಕನ್ನು ಕುಬೇರನ ಮೂಲೆ ಹಾಗೂ ಗಣೇಶನ ಮೂಲೆಯೆಂದು ಕರೆಯುತ್ತಾರೆ. ಹೀಗಾಗಿ ಈ ಮೂಲೆಯಲ್ಲಿಡುವುದರಿಂದ ನಿಮ್ಮ ವೃತ್ತಿಜೀವನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುತ್ತೀರಿ.
ಗಡಿಯಾರವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಫೆಂಗ್ ಶೂಯಿ ಮತ್ತು ವಾಸ್ತು ಪ್ರಕಾರ ದಕ್ಷಿಣ ದಿಕ್ಕನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಯಮನ ದಿಕ್ಕು ಎನ್ನುತ್ತಾರೆ. ಈ ದಿಕ್ಕಿನಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ದಕ್ಷಿಣದ ಗೋಡೆಯ ಮೇಲೆ ಗೋಡೆ ಗಡಿಯಾರವನ್ನು ಸ್ಥಾಪಿಸಿದರೆ, ವ್ಯಕ್ತಿಯ ಗಮನ ಮತ್ತೆ ಮತ್ತೆ ಈ ದಿಕ್ಕಿನೆಡೆಗೆ ಹೋಗುತ್ತದೆ. ಇದು ಒಳ್ಳೆಯದಲ್ಲ ಮತ್ತು ವ್ಯಕ್ತಿಯು ಅದರಿಂದ ನಕಾರಾತ್ಮಕ ಶಕ್ತಿ ಪಡೆಯುತ್ತಾನಂತೆ.
ಗಡಿಯಾರವನ್ನು ಎಂದಿಗೂ ಮುಖ್ಯ ಬಾಗಿಲಿನ ಮುಂದೆ ಅಥವಾ ಬಾಗಿಲಿನ ಮೇಲೆ ಇಡಬಾರದು. ಅದರ ಕೆಳಗಿನಿಂದ ಹೊರಬರುವಾಗ ಸುತ್ತಲಿನ ಶಕ್ತಿಯು ವ್ಯಕ್ತಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಲಾಗಿದೆ. ಇದರ ಪರಿಣಾಮ ಒತ್ತಡ ಹೆಚ್ಚಾಗುತ್ತದೆ. ಮಲಗುವಾಗ ದಿಂಬಿನ ಕೆಳಗೆ ಯಾವುದೇ ಕಾರಣಕ್ಕೂ ವಾಚ್ ಇಡಬಾರದು. ಇದರಿಂದ ನಿಮ್ಮ ಸುಖ ನಿದ್ರೆಗೆ ತೊಂದರೆಯಾಗುತ್ತದೆ.
ಗಡಿಯಾರವನ್ನು ಗೋಡೆಯ ಮೇಲಿರಿಸಲು ಉತ್ತರ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ನೀವು ಕೋಣೆಗೆ ಪ್ರವೇಶಿಸಿದಾಗ ಗಡಿಯಾರ ಗೋಚರಿಸುವ ರೀತಿಯಲ್ಲಿ ಇರಿಸಬೇಕು. ವಾಚ್ ಮೇಲೆ ಧೂಳು ಮತ್ತು ಕೊಳಕು ಇರಬಾರದು. ಮನೆಯ ಮುಖ್ಯ ಸಭಾಂಗಣದಲ್ಲಿ ಸುಮಧುರ ಸಂಗೀತ ಉತ್ಪಾದಿಸುವ ಗೋಡೆ ಗಡಿಯಾರವನ್ನು ಅಳವಡಿಸಬೇಕು. ಇದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗಿದೆ.