ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?
ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಸದ್ಯ ಟಿ20 ವಿಶ್ವಕಪ್’ನಲ್ಲಿ ಅದ್ಭುತ ಫಾರ್ಮ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಅಜೇಯ ಹಾದಿಯಲ್ಲಿದ್ದು, ಇದರಲ್ಲಿ ಪಾಂಡ್ಯ ಕೊಡುಗೆಯೂ ಅಪಾರವಾಗಿದೆ.
ಅಂದಹಾಗೆ ಈ ವರದಿಯಲ್ಲಿ ಹಾರ್ದಿಕ್ ಪಾಂಡ್ಯ ಬೆಳೆದು ಬಂದ ಹಾದಿ ಮತ್ತು ಅವರ ಒಟ್ಟು ನಿವ್ವಳ ಮೌಲ್ಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗುಜರಾತ್’ನ ಚೋರಾಯಸಿಯಲ್ಲಿ 11 ಅಕ್ಟೋಬರ್ 1993 ರಂದು ಜನಿಸಿದ ಹಾರ್ದಿಕ್ ಪಾಂಡ್ಯ, ಇದೀಗ ಟೀಂ ಇಂಡಿಯಾದ ಉಪನಾಯಕ ಜೊತೆಗೆ ಪ್ರಮುಖ ಆಲ್ ರೌಂಡರ್ ಕೂಡ ಹೌದು.
ಹುಟ್ಟು ಬಡಕುಟುಂಬದಿಂದಲೇ ಬೆಳೆದು ಬಂದ ಹಾರ್ದಿಕ್ ಪಾಂಡ್ಯಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಹಿರಿಯ ಸಹೋದರ ಕೃನಾಲ್ ಪಾಂಡ್ಯ ಕ್ರಿಕೆಟ್ ಆಡಲು ಹೋಗುತ್ತಿದ್ದಾಗ, ಅವರ ಜೊತೆ ಹಾರ್ದಿಕ್ ಕೂಡ ಮೈದಾನಕ್ಕೆ ಹೋಗಿ ಮೋಜು ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೃನಾಲ್ ಕೋಚ್ ಕಿರಣ್ ಮೋರೆ ಸಲಹೆ ಮೇರೆಗೆ ಹಾರ್ದಿಕ್ ಕೂಡ ಕ್ರಿಕೆಟ್ ಆಡಲು ಆರಂಭಿಸಿದರು. ಮೊದಲ ಮೂರು ವರ್ಷ ಕೋಚಿಂಗ್ ಫೀಸ್ ಕೂಡ ತೆಗೆದುಕೊಂಡಿರಲಿಲ್ಲ ಕಿರಣ್ ಮೋರೆ.
ಇನ್ನು ವಿದ್ಯಾಭ್ಯಾಸದ ವಿಷಯದಲ್ಲಿ ಹಾರ್ದಿಕ್ ಪಾಂಡ್ಯಗೆ ಬಾಲ್ಯದಿಂದಲೂ ಆಸಕ್ತಿ ಇರಲಿಲ್ಲ. ಇದೇ ಕಾರಣಕ್ಕೆ 9ನೇ ತರಗತಿ ಕೂಡ ಪೂರ್ಣಗೊಳಿಸದೆ ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡಲು ಪ್ರಾರಂಭಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ 9 ನೇ ತರಗತಿ ಪರೀಕ್ಷೆ ಕೂಡ ಬರೆದಿಲ್ಲ. ಹೀಗಾಗಿ ಅವರ ಶೈಕ್ಷಣಿಕ ಅರ್ಹತೆ ಕೇವಲ 8 ನೇ ತರಗತಿ.
ಇನ್ನು ಕ್ರಿಕೆಟ್ ಕಾರಣದಿಂದಲೇ ವಿದ್ಯಾಭ್ಯಾಸ ತೊರೆದ ಹಾರ್ದಿಕ್ ಪಾಂಡ್ಯ ಕಳೆದ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಅವರು ತಮ್ಮ ತಂಡವನ್ನು ಒಂದು ಬಾರಿ ಚಾಂಪಿಯನ್ ಮಾಡಿದ್ದರೆ, ಮತ್ತೊಂದು ಬಾರಿ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.
ಇನ್ನು ಒಂದು ಕಾಲದಲ್ಲಿ 200 ರೂ.ಗೆ ಕ್ರಿಕೆಟ್ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ಇಂದು ಕೋಟಿ ಮೌಲ್ಯದ ಆಸ್ತಿಯ ಒಡೆಯ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಸಂಪತ್ತು ಸುಮಾರು 91 ಕೋಟಿ ರೂ.