WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!
ಪ್ರಸ್ತುತ, ಜಗತ್ತಿನಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಎಂದರೆ ವಾಟ್ಸಾಪ್. ಇದರ ಜನಪ್ರಿಯತೆ ಹೆಚ್ಚಾದಂತೆ ವಾಟ್ಸಾಪ್ ಹ್ಯಾಕರ್‌ಗಳ ಹಾವಳಿಯೂ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಕೇವಲ ನಾಲ್ಕು ಹಂತಗಳನ್ನು ಅನುಸರಿಸಿ ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಒಂದು ಸೆಟ್ಟಿಂಗ್ ಬದಲಾಯಿಸಿದರೆ ಯಾವುದೇ ಹ್ಯಾಕರ್‌ಗೂ ಸಹ ನಿಮ್ಮ ವಾಟ್ಸಾಪ್ ಅನ್ನು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸೆಟ್ಟಿಂಗ್ ಬಗ್ಗೆ ಇಲ್ಲಿದೆ ಮಾಹಿತಿ.
ವಾಸ್ತವವಾಗಿ, ಜನರು ತಮ್ಮ ಮೊಬೈಲ್ ಕಳೆದುಕೊಂಡಾಗ ಇಲ್ಲವೇ ವೆಬ್ ಬ್ರೋಸರ್ ನಲ್ಲಿ ಲಾಗಿನ್ ಆಗಿ ಖಾತೆಯನ್ನು ಲಾಗ್ ಔಟ್ ಮಾಡದೆ ಹಾಗೆ ಬಿಟ್ಟಾಗ ಸುಮಾರು 50% ನಷ್ಟು ವಂಚನೆ ಪ್ರಕರಣಗಳು ಸಂಭವಿಸುತ್ತವೆ. ಇದನ್ನು ತಪ್ಪಿಸಲು ವಾಟ್ಸಾಪ್ ಖಾತೆಗೆ ಪಿನ್ ನಮೂದಿಸುವುದು ಅಗತ್ಯ. ಇದರಿಂದ, ವಂಚಕರು ನಿಮ್ಮ ವಾಟ್ಸಾಪ್ ಅನ್ನು ಹ್ಯಾಕ್ ಮಾಡುವುದನ್ನು ತಪ್ಪಿಸಬಹುದು.
ನಾವು ನಮ್ಮ ಮೊಬೈಲ್ ಸಾಧನವನ್ನು ಸುರಕ್ಷಿತವಾಗಿರಿಸಲು ಸ್ಕ್ರೀನ್ ಲಾಕ್ ಪಿನ್ ಹೊಂದಿಸುವಂತೆಯೇ ನಿಮ್ಮ ವಾಟ್ಸಾಪ್ ಖಾತೆಗೂ ಪಿನ್ ಹೊಂದಿಸಬಹುದು. ವಾಸ್ತವವಾಗಿ, ಎರಡು ರೀತಿಯಲ್ಲಿ ವಾಟ್ಸಾಪ್ ಪಿನ್ ಹೊಂದಿಸಬಹುದು, ಮೊದಲನೆಯದಾಗಿ ನೀವು ನಿಮ್ಮ ವಾಟ್ಸಾಪ್ ಖಾತೆಗೆ ಪಿನ್ ಹೊಂದಿಸುವುದು. ಇದರ ಹೊರತಾಗಿ ನಿಮ್ಮ ವಾಟ್ಸಾಪ್ ಖಾತೆ ಓಪೆನ್ ಆದ ಕೂಡಲೇ ಸಂದೇಶ (ಎಸ್‌ಎಮ್‌ಎಸ್) ಬರುವಂತೆ ಹೊಂದಿಸುವುದು.ಇದನ್ನು ಎರಡು ಹಂತದ ಪರಿಶೀಲನೆ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ನೀವು ನಿಮ್ಮ ವಾಟ್ಸಾಪ್‌ನಲ್ಲಿ ಪಿನ್ ರಚಿಸಲು ಮೊದಲಿಗೆ ವಾಟ್ಸಾಪ್ ಖಾತೆಯನ್ನು ತೆರೆದು ಇದರಲ್ಲಿ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ. ಇಲ್ಲಿ ಅಕೌಂಟ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ ನಂತರ "ಎರಡು-ಹಂತದ ಪರಿಶೀಲನೆ" ಆಯ್ಕೆಮಾಡಿ. ಇದರಲ್ಲಿ "ಸಕ್ರಿಯಗೊಳಿಸು" ಎಂಬ ಆಯ್ಕೆಯನ್ನು ಆರಿಸಿ, ಆರು-ಅಂಕಿಯ ಪಿನ್ ರಚಿಸಿ ಮತ್ತು ಖಚಿತಪಡಿಸಲು ಅದನ್ನು ಮರು-ನಮೂದಿಸಿ.
ಒಂದೊಮ್ಮೆ ನೀವು ಪಿನ್ ಮರೆಯಬಹುದು ಎಂಬ ಅನುಮಾನವಿದ್ದರೆ ಪಿನ್ ಹಿಂಪಡೆಯಲು/ಮರುಹೊಂದಿಸಲು ಇಮೇಲ್ ವಿಳಾಸವನ್ನು ಕೂಡ ಸೇರಿಸಬಹುದು. ನೀವು ಇದಕ್ಕಾಗಿ ಮೇಲ್ ಸೇರಿಸಲು ಬಯಸದಿದ್ದರೆ, "ಸ್ಕಿಪ್" ಟ್ಯಾಪ್ ಮಾಡಬಹುದು.
ನಂತರ ನೀವು ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಎರಡು-ಹಂತದ ಪರಿಶೀಲನೆಯನ್ನು ಆನ್ ಮಾಡಲು ನಿಗದಿತ ಆಯ್ಕೆಯನ್ನು ಆರಿಸಿ. ಈ ಆಯ್ಕೆಯನ್ನು ಆರಿಸಿದ ಬಳಿಕ ನೀವು ಯಾವುದೇ ಹೊಸ ಫೋನ್‌ನಲ್ಲಿ ನಿಮ್ಮ ವಾಟ್ಸಾಪ್ ನಂಬರ್ ಅನ್ನು ನಮೂದಿಸಿದಾಗ SMS ಪರಿಶೀಲನೆ ಕೋಡ್‌ನೊಂದಿಗೆ ಈ ಆರು-ಅಂಕಿಯ PIN ಅನ್ನು ನಮೂದಿಸಬೇಕಾಗುತ್ತದೆ.