ರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್ ಆಗ್ತೀರಾ!
90 ದಶಕದ ಪ್ರಸಿದ್ಧ ಬಾಲಿವುಡ್ ನಟಿ ರವೀನಾ ಟಂಡನ್ ಆಗಾಗ ಸುದ್ದಿಯಲ್ಲಿರುತ್ತಾರೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಲಕ್ಷಾಂತರ ಹೃದಯಗಳನ್ನು ಆಳಿದ ರವೀನಾ ಟಂಡನ್ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಅವರ ಪ್ರೇಮ ಪ್ರಕರಣಗಳ ಬಗ್ಗೆ ಅನೇಕ ವದಂತಿಗಳು ಹರಡಿದ್ದವು. ಈ ಪೈಕಿ ಅಜಯ್ ದೇವಗನ್ ಜೊತೆಗಿನ ಅವರ ಸಂಬಂಧದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು.
ಹೌದು, 'ದಿಲ್ವಾಲೆ' ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ರವೀನಾ ಟಂಡನ್ ಅವರ ಕೆಮಿಸ್ಟ್ರಿ ಸಿನಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ತಮ್ಮ ಕರಿಯರ್‌ನ ಉತ್ತುಂಗದಲ್ಲಿದ್ದಾಗ ಅಜಯ್ ದೇವಗನ್ ಅನೇಕ ನಟಿಯರೊಂದಿಗೆ ಡೇಟಿಂಗ್ ನಡೆಸಿದರು. ಅವರ ಹೆಸರು ಅನೇಕ ಸ್ಟಾರ್ ನಟಿಯರೊಂದಿಗೆ ಥಳಕು ಹಾಕಿಕೊಂಡಿತ್ತು. ಆದರೆ ನಟಿ ರವೀನಾ ಟಂಡನ್ ಜೊತೆಗಿನ ಪ್ರೀತಿ, ಜಗಳ ಇಡೀ ಬಾಲಿವುಡ್‌ನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು.
ʼದಿಲ್ವಾಲೆʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಅಜಯ್ ದೇವಗನ್ & ರವೀನಾ ಟಂಡನ್ ನಡುವೆ ಪ್ರೇಮಾಂಕುರವಾಗಿತ್ತು ಅಂತಾ ಸುದ್ದಿಯಾಗಿತ್ತು. ಈ ಜೋಡಿ ಪರಸ್ಪರ ಡೇಟಿಂಗ್ ನಡೆಸುತ್ತಿದೆ ಅಂತಾ ಪತ್ರಿಕೆಗಳಲ್ಲಿ & ಟಿವಿ ಚಾನೆಲ್‌ಗಳಲ್ಲಿ ಸಖತ್ ಸುದ್ದಿಯಾಗಿತ್ತು. ಆದರೆ ಯಾವಾಗ ಅಜಯ್ ಅವರ ಹೆಸರು ಕರಿಷ್ಮಾ ಕಪೂರ್ ಜೊತೆಗೆ ಥಳಕು ಹಾಕಿಕೊಂಡಿತೋ ಈ ಜೋಡಿಯ ಪ್ರೀತಿ ಹಳಸಿದೆ ಅಂತಾ ಸುದ್ದಿಯಾಯ್ತು. ರವೀನಾ ಜೊತೆಗೆ ಡೇಟಿಂಗ್ ನಡೆಸಿದ ಬಳಿಕ ಅಜಯ್ ಕರಿಷ್ಮಾರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆಂದು ಗಾಳಿಸುದ್ದಿ ಹರಡಿತ್ತು. ಹೀಗಾಗಿ ರವೀನಾ & ಅಜಯ್ ಪರಸ್ಪರ ಬೇರೆಯಾದರು ಎಂದು ಹೇಳಲಾಗಿತ್ತು.
1994ರ ಜುಲೈನಲ್ಲಿ ಫಿಲ್ಮ್‌ಫೇರ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ರವೀನಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಇದಕ್ಕೆ ಕರಿಷ್ಮಾ ಕಪೂರ್ ಅವರೇ ಮುಖ್ಯ ಕಾರಣವೆಂದು ನಂಬಲಾಗಿದೆ. ಏಕೆಂದರೆ ಅಜಯ್ & ಕರಿಷ್ಮಾ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರಂತೆ. ಆಗ ಅಜಯ್ ತನಗೆ ವಂಚಿಸಿದ್ದಾರೆಂದು ರವೀನಾ ಆರೋಪಿಸಿದ್ದರು. ಈ ವೇಳೆ ರವೀನಾ ಅವರು ಅಜಯ್ ಜೊತೆಗಿನ ತಮ್ಮ ವೈಯಕ್ತಿಕ ಫೋಟೋಗಳು & ಅವರು ಬರೆದ ಪತ್ರಗಳನ್ನು ಮಾಧ್ಯಮಗಳಿಗೆ ತೋರಿಸಿದ್ದರಂತೆ.
ಈ ಸುದ್ದಿ ಬಂದ ನಂತರ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಅಜಯ್ ದೇವಗನ್, ರವೀನಾಗೆ ಮನೋವೈದ್ಯರ ಅಗತ್ಯವಿದೆ ಅಂತಾ ಹೇಳಿದ್ದರಂತೆ. ರವೀನಾಗೆ ಬರೆದ ಪತ್ರಗಳ ಬಗ್ಗೆ ಪ್ರಶ್ನಿಸಿದಾಗ, ಯಾವ ಪತ್ರಗಳು? ಅಂತಾ ಅಜಯ್ ಮರುಪ್ರಶ್ನಿಸಿದ್ದರು. ಮುಂದುವರೆದು ʼಆ ಪತ್ರಗಳನ್ನು ಪ್ರಿಂಟ್ ಮಾಡಿ ಹಂಚಲು ಆಕೆಗೆ ಹೇಳಿʼ, ರವೀನಾ ಹುಟ್ಟಿನಿಂದಲೇ ಸುಳ್ಳುಗಾರ್ತಿ, ಪ್ರಚಾರಕ್ಕಾಗಿ ನನ್ನ ಹೆಸರನ್ನು ಆಕೆಯೊಂದಿಗೆ ಥಳಕು ಹಾಕಲಾಗುತ್ತಿದೆ ಅಂತಾ ಅಜಯ್ ಗರಂ ಆಗಿದ್ದರು. ತನ್ನನ್ನು 'ಮಾನಸಿಕ' ಅಸ್ವಸ್ಥೆ, ಮನೋವೈದ್ಯರ ಅಗತ್ಯವಿದೆ ಅಂತಾ ಅಜಯ್ ಹೇಳಿದ್ದಕ್ಕೆ ನೊಂದುಕೊಂಡಿದ್ದ ರವೀನಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.