Ayodhya Ram Mandir: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಇಲ್ಲಿದೆ ಬಿಗ್ ಅಪ್ಡೇಟ್
ಹಿಂದೂಗಳ ಬಹು ವರ್ಷಗಳ ಕನಸಾದ ಅಯೋಧ್ಯೆ ರಾಮ ಮಂದಿರ ನಿರ್ಮಾಣವಾಗಿದೆ. ಇದೀಗ ಭಕ್ತಾಧಿಗಳು ರಾಮಮಂದಿರ ಯಾವಾಗ ಉದ್ಘಾಟನೆಗೊಳ್ಳಲಿದೆ ಎಂದು ಕಾತುರರಾಗಿ ಕಾಯುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ದೊರೆತಿದ್ದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 2024 ರ ಜನವರಿ 21, 22 ಮತ್ತು 23 ರಂದು ರಾಮ ಲಾಲಾ ವಿಗ್ರಹದ ಜೀವನ ಪ್ರತಿಷ್ಠಾಪನೆಗೆ ದಿನಾಂಕವನ್ನು ನಿಗದಿಪಡಿಸಿದೆ ಎಂದು ಹೇಳಲಾಗುತ್ತಿದೆ.
2024ರ ಜನವರಿ 21, 22 ಮತ್ತು 23 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನೂ ಆಹ್ವಾನಿಸಲಾಗುವುದು. ಆದಾಗ್ಯೂ, ಅಯೋಧ್ಯೆ ರಾಮ ಮಂದಿರದ ಮುಖ್ಯ ಕಾರ್ಯಕ್ರಮವನ್ನು ರಾಜಕೀಯ ರಹಿತವಾಗಿಡಲಾಗುವುದು. ಎಂದರೆ ಈ ಕಾರ್ಯಕ್ರಮದಲ್ಲಿ ಯಾವುದೇ ವೇದಿಕೆ ಇರುವುದಿಲ್ಲ ಅಥವಾ ಯಾವುದೇ ಸಾರ್ವಜನಿಕ ಸಭೆ ಇರುವುದಿಲ್ಲ.
ಅಯೋಧ್ಯೆಯ ಎಲ್ಲಾ ಪ್ರಮುಖ ಮಠಗಳ ಖ್ಯಾತ ಸಂತರಿಗೆ ಆಹ್ವಾನ ಕಳುಹಿಸಲು ಟ್ರಸ್ಟ್ ಸಿದ್ಧತೆ ನಡೆಸುತ್ತಿದೆ ಎಂದು ಇದೇ ವೇಳೆ ಚಂಪತ್ ರೈ ಮಾಹಿತಿ ನೀಡಿದ್ದಾರೆ. ಸಮಾರಂಭಕ್ಕೆ 136 ಸನಾತನ ಸಂಪ್ರದಾಯಗಳ 25,000ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ ಎಂದು ತಿಳಿದುಬಂದಿದೆ. ರಾಮ ಜನ್ಮಭೂಮಿ ದೇವಸ್ಥಾನದೊಳಗೆ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳುವ 10000 ವಿಶೇಷ ಅತಿಥಿಗಳಿಗಿಂತ 25000 ಸಂತರು ವಿಭಿನ್ನವಾಗಿರುತ್ತಾರೆ ಎಂತಲೂ ಮಾಹಿತಿ ಲಭ್ಯವಾಗಿದೆ.
ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭದ ಸಮಯದಲ್ಲಿ ಆಗಮಿಸುವ ಭಕ್ತರಿಗೆ ಸಂಪೂರ್ಣ ಒಂದು ತಿಂಗಳುಗಳ ಕಾಲ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಯೋಜಿಸಲಾಗುತ್ತಿದೆ. ಜನವರಿ ತಿಂಗಳಾದ್ಯಂತ ಪ್ರತಿದಿನ ಸುಮಾರು 75,000-100,000 ಜನರಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲು ಟ್ರಸ್ಟ್ ಯೋಜಿಸುತ್ತಿದೆ ಎನ್ನಲಾಗಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಗರ್ಭಗುಡಿಯ ಮುಖ್ಯ ದ್ವಾರವು ಚಿನ್ನದ ಹೊದಿಕೆಯನ್ನು ಹೊಂದಿರುತ್ತದೆ. ದೇವಾಲಯದ 161 ಅಡಿ ಎತ್ತರದ ಶಿಖರವನ್ನು ಸಹ ಚಿನ್ನದಿಂದ ಮುಚ್ಚಲಾಗುತ್ತದೆ ಎಂದು ಈ ಹಿಂದೆ, ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಮತ್ತು ಪ್ರಧಾನಿ ಮೋದಿಯ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಹೇಳಿದ್ದರು.
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ರಾಮಲಾಲಾ ಪ್ರತಿಮೆ 51 ಇಂಚು ಎತ್ತರ ಇರಲಿದೆ. ಕರ್ನಾಟಕದ ಮೈಸೂರಿನಿಂದ ತಂದ ಕಲ್ಲುಗಳಿಂದ ಈ ಮೂರ್ತಿಯನ್ನು ತಯಾರಿಸಲಾಗುತ್ತಿದೆ.
ಇನ್ನೂ ಇದಲ್ಲದೆ, ರಾಜಸ್ಥಾನದ ಮಕ್ರಾನಾದ ಅಮೃತಶಿಲೆಯಿಂದ ರಾಮ್ ಲಾಲಾನ ಮತ್ತೊಂದು ವಿಗ್ರಹವನ್ನು ತಯಾರಿಸಲಾಗುತ್ತಿದೆ. ದೇವಾಲಯದ ಮುಂಭಾಗದಲ್ಲಿ ದೀಪಗಳನ್ನು ಕೂಡ ಅಳವಡಿಸಲಾಗುವುದು ಎಂದು ಟ್ರಸ್ಟ್ ಮಾಹಿತಿಯನ್ನು ನೀಡಿದೆ.