ಪಾಕ್’ನ್ನು ಸೋಲಿಸಿ `ಜೈ ಶ್ರೀಹನುಮಾನ್` ಎಂದು ಪೋಸ್ಟ್ ಮಾಡಿದ ಆಂಜನೇಯ ಭಕ್ತ ಈ ಕೇಶವ್ ಮಹರಾಜ್ ಯಾರು ಗೊತ್ತಾ?
ಕಳೆದ ದಿನ ಅಂದರೆ ಅಕ್ಟೋಬರ್ 27 ಶುಕ್ರವಾರದಂದು ಪಾಕಿಸ್ತಾನ ವಿರುದ್ಧ ಸೌತ್ ಆಫ್ರಿಕಾ ತಂಡ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕ್’ನ್ನು ಮಣಿಸಿದೆ, ಈ ಮೂಲಕ ಬಹುತೇಕ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಹೊರಗುಳಿಯುವಂತಾಗಿದೆ. ಅಂದಹಾಗೆ ಈ ಪಂದ್ಯದಲ್ಲಿ ಸ್ಪಿನ್ ಆಲ್ ರೌಂಡರ್ ಕೇಶವ್ ಮಹಾರಾಜ್ ಹೀರೋ ಎನಿಸಿಕೊಂಡಿದ್ದು ಸುಳ್ಳಲ್ಲ.
ಸ್ಪಿನ್ ಆಲ್ ರೌಂಡರ್ ಕೇಶವ್ ಮಹಾರಾಜ್ ಒಂದೇ ಒಂದು ವಿಕೆಟ್ ಪಡೆದಿಲ್ಲ. ಅಷ್ಟೇ ಅಲ್ಲದೆ, ಬ್ಯಾಟಿಂಗ್’ನಲ್ಲೂ ಕೂಡ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ. 21 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ್ದರು. ಆದರೆ 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದ ತಮ್ಮ ತಂಡಕ್ಕೆ ಮಹಾರಾಜ್ ಭರ್ಜರಿ ಜಯ ತಂದುಕೊಟ್ಟು ಹೀರೋ ಎನಿಸಿಕೊಂಡರು.
ಪಾಕಿಸ್ತಾನದ ಬೌಲರ್’ಗಳನ್ನು ಧೈರ್ಯದಿಂದ ಎದುರಿಸಿ ಸಮಯೋಚಿತ ಪ್ರದರ್ಶನ ತೋರಿದ ಕೇಶವ ಮಹಾರಾಜ್ ತಂಡಕ್ಕೆ ಹೀರೋ ಎನಿಸಿದರು. ಈ ಪಂದ್ಯದಲ್ಲಿ ಪಾಕಿಸ್ತಾನ 46.4 ಓವರ್’ಗಳಲ್ಲಿ 270 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 47.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.
ಇನ್ನು ಭಾರತೀಯ ಮೂಲದ ಕೇಶವ್ ಮಹಾರಾಜ್ ಅವರು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಬಳಿಕ ತಮ್ಮ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್’ನಲ್ಲಿ ‘ಜೈ ಶ್ರೀ ಹನುಮಾನ್’ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಭಾರತೀಯ ಮೂಲದ ಕೇಶವ ಮಹಾರಾಜ್ ಫೆಬ್ರವರಿ 7, 1990 ರಂದು ಡರ್ಬನ್’ನಲ್ಲಿ ಜನಿಸಿದರು. ಹನುಮಂತ ದೇವರನ್ನು ಆರಾಧನೆ ಮಾಡುವ ಮಹಾರಾಜ್, ತಮ್ಮ ಇನ್’ಸ್ಟಾಗ್ರಾಮ್ ಬಯೋದಲ್ಲಿ ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್ ಎಂದು ಬರೆದಿದ್ದಾರೆ. ಅವರ ಬ್ಯಾಟ್ ಮೇಲೆ ಕೂಡ ‘ಓಂ’ ಎಂದು ಬರೆದಿರುವುದನ್ನು ಕಾಣಬಹುದು.
ಕೇಶವ್ ಮಹಾರಾಜ್ ಅವರ ಆಟದ ಬಗ್ಗೆ ಹೇಳುವುದಾದರೆ, 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿದ್ದ ಅವರು, 2017 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ODI’ಗೆ ಪಾದಾರ್ಪಣೆ ಮಾಡಿದರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚಿರುವ ಕೇಶವ್ ಮಹಾರಾಜ್ ಇದೀಗ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.
ಭಾರತದ ಮೂಲಗಳನ್ನು ಮರೆಯದ ಈ ಸ್ಟಾರ್ ಆಲ್ ರೌಂಡರ್ ಆಗಾಗ ಭಾರತಕ್ಕೆ ಬಂದು ಇಲ್ಲಿನ ಹನುಮಾನ್ ದೇಗುಲಗಳಿಗೆ ಭೇಟಿ ನೀಡುತ್ತಿರುತ್ತಾರೆ. ICC ODI ವಿಶ್ವಕಪ್ 2023 ಪ್ರಾರಂಭವಾಗುವ ಮೊದಲು ಮಹಾರಾಜ್ ಅವರು ತಿರುವನಂತಪುರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.