ಆರಂಭಿಕ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ RCBಗೆ ಸಿಂಹಸ್ವಪ್ನವಾಗಿ ಕಾಡಿದ ಈ ಎಂ.ರೆಹಮಾನ್ ಯಾರು? ಆತನ ಹಿನ್ನೆಲೆ ಏನು ಗೊತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಾರ್ಚ್ 22ರಂದು ಮೊದಲ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಭರ್ಜರಿ ಜಯ ಸಾಧಿಸಿದ್ದು, ಆರ್ ಸಿ ಬಿ ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿದೆ.
ಅಂದಹಾಗೆ ಈ ಪಂದ್ಯದಲ್ಲಿ ಚೆನ್ನೈ ತಂಡದ ಮುಸ್ತಫಿಜುರ್ ರೆಹಮಾನ್ 4 ವಿಕೆಟ್ ಕಬಳಿಸಿ ಆರ್ ಸಿ ಬಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ಈ ಬೌಲರ್ ಯಾರು? ಈತನ ಹಿನ್ನೆಲೆ ಏನು ಎಂಬುದನ್ನು ಮುಂದೆ ತಿಳಿಯೋಣ.
ಮುಸ್ತಫಿಜುರ್ ರೆಹಮಾನ್ ಎಡಗೈ ವೇಗದ ಬೌಲರ್ ಆಗಿದ್ದು, ಬಾಂಗ್ಲಾದೇಶ ಮೂಲದ ಆಟಗಾರ. ಢಾಕಾದಿಂದ ಸುಮಾರು 300 ಕಿಮೀ ದೂರದಲ್ಲಿರುವ ಸತ್ಖಿರಾದಲ್ಲಿ ನಡೆದ ಅಂಡರ್-17 ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರೆಹಮಾನ್, 2012 ರಲ್ಲಿ ವೇಗದ ಬೌಲಿಂಗ್ ತರಬೇತಿ ಪಡೆಯಲು ಢಾಕಾಕ್ಕೆ ಆಗಮಿಸಿದರು.
ಅದಾದ ಬಳಿಕ BCBಯ ಪೇಸ್ ಫೌಂಡೇಶನ್’ಗೆ ಪ್ರವೇಶ ಪಡೆದರು. ಇನ್ನು 2013-14 ಋತುವಿನಲ್ಲಿ ಖುಲ್ನಾ ಪರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. UAE ನಲ್ಲಿ ನಡೆದ U-19 ವಿಶ್ವಕಪ್’ನಲ್ಲಿ ಎಂಟು ವಿಕೆಟ್’ಗಳನ್ನು ಪಡೆದ ನಂತರ, ಆಶ್ಚರ್ಯಕರವಾಗಿ ಬಾಂಗ್ಲಾದೇಶ A ತಂಡದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾದರು. ಆ ಸಣ್ಣ ಪ್ರವಾಸದಿಂದ ಹಿಂದಿರುಗಿದ ಅವರು ಉತ್ತಮ ಬೌಲರ್ ಎಂದು ಪರಿಗಣಿಸಲ್ಪಟ್ಟರು. ನಂತರ 2014-15 ಪ್ರಥಮ ದರ್ಜೆಯ ಋತುವಿನಲ್ಲಿ 19.08 ರ ಸರಾಸರಿಯಲ್ಲಿ 26 ವಿಕೆಟ್ಗಳನ್ನು ಪಡೆದರು.
2015 ರ ಮಧ್ಯದಲ್ಲಿ, ಭಾರತದ ವಿರುದ್ಧದ ODI ಸರಣಿಯಲ್ಲಿ ಬ್ರಿಯಾನ್ ವಿಟೋರಿ ಬಳಿಕ ಮೊದಲ ಎರಡು ODIಗಳಲ್ಲಿ ಐದು ವಿಕೆಟ್ ಗಳಿಸಿದ ಎರಡನೇ ಬೌಲರ್ ಎನಿಸಿಕೊಂಡರು. ಅಷ್ಟೇ ಅಲ್ಲದೆ, ಭಾರತ ವಿರುದ್ಧ ಬಾಂಗ್ಲಾದೇಶದ ಮೊದಲ ODI ಸರಣಿ ಗೆಲ್ಲಲು ಇದು ದಾರಿ ಮಾಡಿಕೊಟ್ಟಿತು.
ಪ್ರಸ್ತುತ ಸಿ ಎಸ್ ಕೆ ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಆರಂಭಿಕ ಪಂದ್ಯದಲ್ಲೇ ಮಿಂಚಿದ್ದಾರೆ.