‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಗಂಗಕ್ಕ ಖ್ಯಾತಿಯ ಹರ್ಷಿತಾ ಹೊರಬಂದಿದ್ಯಾಕೆ? ಸ್ವತಃ ಅವರೇ ನೀಡಿದ ಕಾರಣ ಇದು...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ದಲ್ಲಿ ಗಂಗಕ್ಕ ಪಾತ್ರ ಮಾಡುತ್ತಿದ್ದ ಹರ್ಷಿತಾ ಸೀರಿಯಲ್ ತೊರೆದು ಹೊರಬಂದಿದ್ದಾರೆ. ಅಂದಹಾಗೆ ದಿಢೀರ್ ಆಗಿ ಸೀರಿಯಲ್ ತೊರೆಯಲು ಕಾರಣ ಏನು ಎಂಬುದನ್ನು ಸ್ವತಃ ಅವರೇ ಲೈವ್ ಬಂದು ಹೇಳಿದ್ದಾರೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್ ಮನೆಗೆಲಸದಾಕೆಯಾಗಿ ಪಾತ್ರ ನಿರ್ವಹಿಸುತ್ತಿದ್ದ ಹರ್ಷಿತಾ. ಕಥಾನಾಯಕಿ ಲಕ್ಷ್ಮೀಗೆ ಸಪೋರ್ಟ್ ನೀಡುತ್ತಿದ್ದ ಗಂಗಕ್ಕ ಪಾತ್ರಧಾರಿ ಹರ್ಷಿತಾ, ತನ್ನ ಪಾತ್ರಕ್ಕೆ ಕೊಂಚ ಕಾಮಿಡಿ ಟಚ್ ಕೂಡ ನೀಡಿ ಜೀವ ತುಂಬಿದ್ದರು. ಅನೇಕರಿಗೆ ಇವರ ನಟನೆ ಹಿಡಿಸಿತ್ತು.
ಆರಂಭದಿಂದ ಗಂಗಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹರ್ಷಿತಾ ಇದೀಗ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಿದ್ದಾರೆ. ಅವರ ಜಾಗಕ್ಕೆ ಬೇರೊಬ್ಬರು ಬಂದಿದ್ದಾರೆ.
ಇನ್ನು ಈ ತಂಡದಿಂದ ಆಚೆ ಬಂದಿದ್ಯಾಕೆ? ಎಂಬ ಜನರ ಪ್ರಶ್ನೆಗೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದು ನಟಿ ಹರ್ಷಿತಾ ಉತ್ತರಿಸಿದ್ದಾರೆ.
"ಲಕ್ಷ್ಮೀ ಬಾರಮ್ಮ ಸೀರಿಯಲ್ ಬಿಟ್ಟಿರೋದಕ್ಕೆ ಕಾರಣ ಏನು ಅಂತ ಹೇಳ್ತೀನಿ. ತುಂಬಾ ಬೇಜಾರಾಗಿನೇ ಬಿಟ್ಟಿರೋದು. ಆದ್ರೆ ಮತ್ತೆ ಆ ಧಾರಾವಾಹಿಗೆ ಬರಲ್ಲ, ಬೇರೆ ಸೀರಿಯಲ್ ಮೂಲಕ ನಿಮ್ಮನ್ನ ಮನರಂಜನೆ ಮಾಡುತ್ತೇನೆ" ಎಂದಿದ್ದಾರೆ.
ಲಕ್ಷ್ಮೀ ಬಾರಮ್ಮ ಜೊತೆಗೆ ‘ಶ್ರಾವಣಿ ಸುಬ್ರಹ್ಮಣ್ಯ’ ಹಾಗೂ ‘ರಾಧಿಕಾ’ ಸೀರಿಯಲ್ಗಳಲ್ಲೂ ನಟಿ ಹರ್ಷಿತಾ ಅಭಿನಯಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಹರ್ಷಿತಾ, ‘’ನಾನು ಬೇರೆ ಸೀರಿಯಲ್ ಸಹ ಮಾಡ್ತಾ ಇದ್ದೆ. ಆದರೆ, ಹೆಚ್ಚಿನ ಸಮಯವನ್ನು ಲಕ್ಷ್ಮೀ ಬಾರಮ್ಮಗೆ ಕೊಟ್ಟಿದ್ದೆ. ಆದರೂ ತಂಡದಲ್ಲಿ ರೀಪ್ಲೇಸ್ ಮಾಡುವುದಕ್ಕೆ ನೋಡ್ತಾ ಇದ್ರು. ಇದು ನನಗೆ ಬೇಸರ ಆಗ್ತಾ ಇತ್ತು. ನನ್ನಿಂದ ಅವರಿಗೂ ತೊಂದರೆ ಆಗೋದು ಬೇಡ ಅಂತ ಪಾತ್ರದಿಂದ ಹೊರಗೆ ಬಂದೆ. ಒಂದು ಮಾತನ್ನಾದರೂ ನನಗೆ ಹೇಳಿ ರೀಪ್ಲೇಸ್ ಹುಡುಕಬಹುದಿತ್ತು’’ ಎಂದು ನಟಿ ಹರ್ಷಿತಾ ಹೇಳಿದ್ದಾರೆ.
‘’ನನಗೆ ಪ್ರೊಡಕ್ಷನ್ ಮೇಲೆ ಬೇಸರ ಇಲ್ಲ. ಮಿಲನಾ ಪ್ರಕಾಶ್ ಸರ್ಗೆ ಖಂಡಿತ ಈ ಸಮಯದಲ್ಲಿ ಧನ್ಯವಾದ ಹೇಳುತ್ತೇನೆ. ಕಲರ್ಸ್ ಕನ್ನಡ ವಾಹಿನಿ ಜೊತೆ ನನಗೆ ಬಹಳ ವರ್ಷಗಳ ನಂಟಿದೆ. ನನ್ನ ಮೊದಲ ಕೆಲಸ ಶುರುವಾಗಿದ್ದೇ ಈ ವಾಹಿನಿಯಿಂದ" ಎಂದು ಸಹ ನಟಿ ಹೇಳಿಕೆ ನೀಡಿದ್ದಾರೆ.