Year End 2023: ಈ ವರ್ಷ ನಾಯಕರನ್ನೂ ಮೀರಿ ಮಿಂಚಿದ ಖಳನಾಯಕರು..!
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ‘ಅನಿಮಲ್’ ಈ ವರ್ಷ ಬಾಕ್ಸಾ ಆಫೀಸ್ ಲೂಟಿ ಮಾಡಿದೆ. ಬಿಡುಗಡೆಯಾದಾಗಿನಿಂದಲೂ ಸಖತ್ ಸೌಂಡ್ ಮಾಡುತ್ತಿರುವ ಈ ಚಿತ್ರ ಇಂದಿಗೂ ತನ್ನ ಖದರ್ ಉಳಿಸಿಕೊಂಡಿದೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ನಟಿಸುವ ಮೂಲಕ ಮಿಂಚಿದ್ದಾರೆ. ಚಿತ್ರದಲ್ಲಿನ ಬಾಬಿಯವರ ಖಡಕ್ ವಿಲನ್ ಶೈಲಿಯ ನಟನೆ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಹೀಗಾಗಿಯೇ ‘ಅನಿಮಲ್’ ಸಿನಿಮಾಗೆ ಮೈಲೇಜ್ ಸಿಕ್ಕಿದೆ.
‘ಗದರ್ 2’ನಲ್ಲಿ ತಾರಾ ಸಿಂಗ್ ಪಾತ್ರದಲ್ಲಿ ನಟಿಸಿದ ಸನ್ನಿ ಡಿಯೋಲ್ ಎಷ್ಟು ಚರ್ಚೆಗೆ ಒಳಗಾದರೋ, ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿರುವ ಮನೀಶ್ ವಾಧ್ವಾ ಅಷ್ಟೇ ಸುದ್ದಿ ಮಾಡಿದ್ದಾರೆ. ಪಾಕಿಸ್ತಾನದ ಸೇನಾ ಅಧಿಕಾರಿಯ ಪಾತ್ರವನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಂಡ ಮನೀಷ್ ಅವರನ್ನು ಸಹ ಜನರು ಪ್ರಶಂಸಿಸಿದ್ದಾರೆ. ಇದಕ್ಕೂ ಮುನ್ನ ಮನೀಷ್ ಪಠಾಣ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ ಜನರನ್ನು ಆಕರ್ಷಿಸಿದ್ದರು.
ಈ ವರ್ಷದ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ‘ಲಿಯೋ’ ಸಖತ್ ಸೌಂಡ್ ಮಾಡಿತು. ದಳಪತಿ ವಿಜಯ್ ನಾಯಕ ನಟರಾಗಿ ಮಿಂಚಿದ್ರೆ, ಆಂಟೋನಿ ದಾಸ್ ಪಾತ್ರದ ಬಗ್ಗೆಯೂ ಸಾಕಷ್ಟು ಚರ್ಚೆಯಾಯಿತು. ಈ ಪಾತ್ರವನ್ನು ಬಾಲಿವುಡ್ ನಟ ಸಂಜಯ್ ದತ್ ನಿರ್ವಹಿಸಿದ್ದಾರೆ. ಅವರು ಸೌತ್ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದು, ಲಕ್ಷಾಂತರ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಇಂದು ವಿಜಯ್ ಸೇತುಪತಿ ಸೌತ್ ಇಂಡಸ್ಟ್ರಿಯಲ್ಲಿ ಎಷ್ಟು ಜನಪ್ರಿಯವೋ ಅಷ್ಟೇ ಜನಪ್ರಿಯತೆ ಬಾಲಿವುಡ್‍ನಲ್ಲಿಯೂ ಇದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ ‘ಜವಾನ್’ ಚಿತ್ರದಲ್ಲಿ ವಿಜಯ್ ಬೂದು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರದ ಹೆಸರು ಕಾಳಿ. ಚಿತ್ರದಲ್ಲಿ ಶಾರುಖ್ ಖಾನ್‍ಗೆ ಎಲ್ಲ ರೀತಿಯಲ್ಲೂ ಪೈಪೋಟಿ ನೀಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ‘ಟೈಗರ್ 3’ ಚಿತ್ರ ಈ ವರ್ಷ ಬಿಡುಗಡೆಯಾಯಿತು. ಇದರಲ್ಲಿ ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಇಮ್ರಾನ್ ಹಶ್ಮಿ ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ತಮ್ಮ ವಿಲನ್ ಪಾತ್ರದ ಮೂಲಕ ಅವರು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
‘ಟೈಗರ್ 3’ರಲ್ಲಿ ಇಮ್ರಾನ್ ಹಶ್ಮಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದರೆ, ‘ಪಠಾಣ್’ನಲ್ಲಿ ಜಾನ್ ಅಬ್ರಹಾಂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಚಿತ್ರದಲ್ಲಿ ಜಿಮ್ಮಿ ಪಾತ್ರದಲ್ಲಿ ಅವರು ಉತ್ತಮವಾಗಿ ನಟಿಸುವ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ‘ಧೂಮ್’ ಸಿನಿಮಾದ ಬಳಿಕ ಹಲವು ವರ್ಷಗಳ ನಂತರ ಇಂತಹ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದಾರೆ.