ಜೀ ಕನ್ನಡ ನ್ಯೂಸ್ ಇಂಪ್ಯಾಕ್ಟ್: ಕಲುಷಿತ ನೀರಿನಿಂದ ಗಾಮಸ್ಥರಿಗೆ ಕೊನೆಗೂ ಮುಕ್ತಿ
ಚಾಮರಾಜನಗರ: ಪೈಪ್ ಲೈನ್ ಒಡೆದು ನೀರು ಬಾರದೇ ಹಳ್ಳದ ನೀರನ್ನು ಬಸಿದು ಕುಡಿಯುತ್ತಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಆನೆಹೊಲ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ದೊರಕಿಸಿ ಕೊಡುವಲ್ಲಿ ಜೀ ಕನ್ನಡ ನ್ಯೂಸ್ ಯಶಸ್ವಿಯಾಗಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆನೆಹೋಲ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ವೇಳೆ ನೀರಿನ ಪೈಪ್ ತುಂಡಾಗಿತ್ತು.
ಕಳೆದ 8 ದಿನಗಳಿಂದ ದುರಸ್ತಿ ಪಡಿಸದಿದ್ದರಿಂದ ಹಳ್ಳದ ನೀರನ್ನು ಗ್ರಾಮಸ್ಥರು ಸೋಸಿ ಕುಡಿಯುತ್ತಿದ್ದರು.
ಗ್ರಾಮಸ್ಥರ ಬವಣೆ ಬಗ್ಗೆ ಜೀ ಕನ್ನಡ ನ್ಯೂಸ್ ಇಂದು ಬೆಳಗ್ಗೆಯಿಂದ ವರದಿ ಬಿತ್ತರಿಸಿ ತಾಲೂಕು ಆಡಳಿತದ ಗಮನ ಸೆಳೆದಿತ್ತು.
ಕೊನೆಗೂ ಎಚ್ಚೆತ್ತ ಆಡಳಿತ ಯಂತ್ರ ಮಲೆಮಹದೇಶ್ವರ ಬೆಟ್ಟ ಗ್ರಾಪಂ ಪಿಡಿಒ ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪೈಪ್ ಲೈನ್ ದುರಸ್ತಿಪಡಿಸಿದ್ದು ಗ್ರಾಮದ ತೊಂಬೆಗಳಿಗೆ ನೀರು ಬಂದಿದೆ.