IPL 2020 ನೀರಿಕ್ಷೆಯಲ್ಲಿರುವವರಿಗೊಂದು ಕಹಿ ಸುದ್ದಿ
ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಇದೀಗ ಕೊರೊನಾ ವೈರಸ್ ನ ಕರಿನೆರಳು ಬಿದ್ದಿದೆ. ಈ ಕುರಿತು BCCI ಮೂಲಗಳಿಂದ ತಿಳಿದುಬಂದ ಮಾಹಿತಿ ಪ್ರಕಾರ ಈ ಪಂದ್ಯಾವಳಿಗಳನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ನಿರೀಕ್ಷೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯೊಂದು ಪ್ರಕಟಗೊಂಡಿದೆ. ಮಾರ್ಚ್ 29ಕ್ಕೆ ಆರಂಭಗೊಳ್ಳಬೇಕಿದ್ದ ಈ ಪಂದ್ಯಾವಳಿಯನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು BCCI ಮೂಲಗಳು ನೀಡಿರುವ ಮಾಹಿತಿ ಪ್ರಕಾರ IPL ಮೇಲೆ ಕಾರೋನಾ ವೈರಸ್ ಸಂಕ್ರಮ ಪ್ರಭಾವ ಬೀರುವ ಸಾಧ್ಯತೆ ಇದ್ದು, ಇದೆ ಕಾರಣದಿಂದ ಪಂದ್ಯಾವಳಿಗಳ ಆಯೋಜನೆ ಪೋಸ್ಟ್ಪೋನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಇದುವರೆಗೆ ಭಾರತದಲ್ಲಿ ಕೊರೊನಾ ವೈರಸ್ ನ ಒಟ್ಟು 41 ಪ್ರಕರಣಗಳು ಬೆಳಕಿಗೆ ಬಂದಿವೆ.
ಕೋರೋನಾ ವೈರಸ್ ಕಾರಣದಿಂದ IPL ಪಂದ್ಯಾವಳಿ ಮುಂದೂಡುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ BCCI ಮೂಲಗಳು, "IPL ಆರಂಭಗೊಳ್ಳಲು ಇನ್ನೂ ಸಾಕಷ್ಟು ಸಮಯಾವಕಾಶ ಇದೆ. ಇದುವರೆಗೆ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಈ ಕುರಿತು ನಾವು ಖಂಡಿತ ಎಚ್ಚರಿಕೆ ವಹಿಸಲಿದ್ದೇವೆ" ಎಂದಿವೆ.
ಇದಕ್ಕೂ ಮೊದಲು ಶನಿವಾರ ಈ ಕುರಿತು ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ, ದೇಶಾದ್ಯಂತ ಪಸರಿಸುತ್ತಿರುವ ಭೀತಿಯ ಹಿನ್ನೆಲೆ ಐಪಿಎಲ್ ಪಂದ್ಯಾವಳಿಗಳ ಆಯೋಜನೆಯನ್ನು ನಂತರ ಮುಂದೂಡಲಾಗುವುದು ಎಂದಿದ್ದರು. ಈ ಕುರಿತು ಮಾತನಾಡಿದ್ದ ಅವರು, "ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಒಟ್ಟಿಗೆ ಸೇರುವುದರಿಂದ ಸೋಂಕು ಹಾಗೂ ರೋಗಗಳು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ IPLಗಳಂತಹ ಟೂರ್ನಿಗಳನ್ನು ಮುಂದೂಡುವುದು ಉಚಿತ" ಎಂದು ಹೇಳಿದ್ದರು. ಅಷ್ಟೇ ಅಲ್ಲ IPL ಸ್ಥಗಿತಗೊಳಿಸುವ ಕುರಿತು ಅಧಿಕೃತವಾಗಿ ಚರ್ಚೆಗಳು ನಡೆಯುತ್ತಿದ್ದು, ಶೀಘ್ರವೇ ಈ ಕುರಿತು ಘೋಷಣೆ ಮಾಡಲಾಗುವುದು ಎಂದೂ ಕೂಡ ಟೋಪೆ ಹೇಳಿದ್ದರು.
ಈ ಹಿಂದೆ ಈ ಕುರಿತು ಹೇಳಿಕೆ ನೀಡಿದ್ದ BCCI ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಪಂದ್ಯಾವಳಿಯನ್ನು ನಿರ್ಧಾರಿತ ಸಮಯಕ್ಕೆ ನಡೆಸಲಾಗುವುದು ಮತ್ತು ಕೊರೊನಾ ವೈರಸ್ ನ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದರು. ಜೊತೆಗೆ IPL ಆಯೋಜನೆ ಇನ್ನೂ ಆನ್ ಇದ್ದು, ಮಂಡಳಿ ಟೂರ್ನಿಯ ಸುಗಮ ಆಯೋಜನೆಗೆ ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದಿದ್ದರು.