‘ಆಸ್ಟ್ರೇಲಿಯಾವನ್ನು ಸೋಲಿಸಿ, ಇಲ್ಲವೇ ವಿಶ್ವಕಪ್ ಮರೆತುಬಿಡಿ..’: ರೋಹಿತ್ ಶರ್ಮಾಗೆ ಸವಾಲು!
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಸೆಪ್ಟೆಂಬರ್ 20ರಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ T20 ಸರಣಿ ಆಡಲಿದೆ. ಏತನ್ಮಧ್ಯೆ ರೋಹಿತ್ ಶರ್ಮಾಗೆ ಗೌತಮ್ ಗಂಭೀರ್ ಸವಾಲು ಹಾಕಿದ್ದಾರೆ.
ನವದೆಹಲಿ: ಟೀಂ ಇಂಡಿಯಾ ಇದೀಗ ತನ್ನ ಆತಿಥ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿ ಆಡಲಿದೆ. 3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ನಡೆಯಲಿದೆ. ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದ ತಂಡವು ಈ ಸರಣಿ ಗೆಲ್ಲುವ ಮೂಲಕ ಮುಂಬರುವ T20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ನಾಯಕ ರೋಹಿತ್ ಶರ್ಮಾಗೆ ನೇರ ಸವಾಲು ಹಾಕಿದ್ದಾರೆ.
‘ಆಸ್ಟ್ರೇಲಿಯಾ ಸೋಲಿಸುವುದು ಅತ್ಯವಶ್ಯಕ’
ತಮ್ಮ ತೀಕ್ಷ್ಣ ಟೀಕೆಗಳಿಂದಲೇ ಸುದ್ದಿಯಾಗುವ ಭಾರತ ತಂಡದ ಮಾಜಿ ಸ್ಟಾರ್ ಆರಂಭಿಕ ಆಟಗಾರ ಗೌತಮ್ ಗಂಭೀರ್, ರೋಹಿತ್ ಶರ್ಮಾಗೆ ಸವಾಲು ಹಾಕಿದ್ದಾರೆ. ‘ಮುಂಬರುವ ಟಿ-20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಲು ಟೀಂ ಇಂಡಿಯಾಗೆ ಸಾಧ್ಯವಾಗದಿದ್ದರೆ, ವಿಶ್ವಕಪ್ ಗೆಲ್ಲುವುದು ಕಷ್ಟ’ವೆಂದು ಹೇಳಿದ್ದಾರೆ. ‘ನಾನು ಇದನ್ನು ಮೊದಲೇ ಹೇಳಿದ್ದೇನೆ. ಮತ್ತೆ ಮತ್ತೆ ಹೇಳುತ್ತಿದ್ದೇನೆ. ಮುಂಬರುವ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸದಿದ್ದರೆ ಟಿ-20 ವಿಶ್ವಕಪ್ ಗೆಲ್ಲಲು ಸಾಧ್ಯವೇ ಇಲ್ಲ’ವೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: New Rule in IPL: ಇನ್ಮುಂದೆ IPLನಲ್ಲಿ ಒಂದು ತಂಡದಿಂದ 15 ಆಟಗಾರರು ಆಡಬಹುದು:ಹೇಗೆ ಸಾಧ್ಯ?
ಆಸ್ಟ್ರೇಲಿಯಾ ಸೋಲಿಸಿದರೆ ಆತ್ಮವಿಶ್ವಾಸ ಹೆಚ್ಚಲಿದೆ
ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕ್ರಿಕೆಟಿಗ ಕಮ್ ರಾಜಕಾರಣಿ ಗಂಭೀರ್ ಹೇಳಿದ್ದಾರೆ. ‘ನನ್ನ ಪ್ರಕಾರ 2007ರ ಟಿ-20 ವಿಶ್ವಕಪ್‍ನಲ್ಲಿ ನಾವು ಆಸ್ಟ್ರೇಲಿಯಾವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ್ದೇವು. 2011ರ ಏಕದಿನ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿಯೂ ಆಸೀಸ್ ವಿರುದ್ಧ ನಾವು ಗೆಲುವು ಸಾಧಿಸಿದ್ದೇವು. ಆಸ್ಟ್ರೇಲಿಯಾ ಅತ್ಯಂತ ಸ್ಪರ್ಧಾತ್ಮಕ ತಂಡಗಳಲ್ಲಿ ಒಂದಾಗಿದೆ. ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಆಸ್ಟ್ರೇಲಿಯಾನ್ನು ಸೋಲಿಸಲೇಬೇಕು’ ಅಂತಾ ಗಂಭೀರ್ ಹೇಳಿದ್ದಾರೆ.
15 ವರ್ಷಗಳಿಂದ ಟ್ರೋಫಿಗಾಗಿ ಕಾಯುತ್ತಿರುವ ಫ್ಯಾನ್ಸ್!
ಭಾರತ ತಂಡ ಮತ್ತು ಅದರ ಅಭಿಮಾನಿಗಳು ಕಳೆದ 15 ವರ್ಷಗಳಿಂದ ಟಿ-20 ವಿಶ್ವ ಟ್ರೋಫಿಗಾಗಿ ಕಾಯುತ್ತಿದ್ದಾರೆ. 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಟಿ-20 ವಿಶ್ವಕಪ್ ಗೆದ್ದಿತ್ತು. ಅಂದಿನಿಂದ ಭಾರತಕ್ಕೆ ಒಮ್ಮೆಯೂ ಈ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ವಿಶೇಷವೆಂದರೆ ಗೌತಮ್ ಗಂಭೀರ್ 2007ರ ಟಿ-20 ವಿಶ್ವ ವಿಜೇತ ತಂಡದ ಸದಸ್ಯರಾಗಿದ್ದರು. ಈ ಪಂದ್ಯದಲ್ಲಿ ಆರಂಭಿಕರಾಗಿ 75 ರನ್‌ಗಳ ಅದ್ಭುತ ಇನ್ನಿಂಗ್ಸ್ ಕೂಡ ಆಡಿದ್ದರು. ಭಾರತ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾ ವಿರುದ್ಧದ T20 ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಹೊಡೆತ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.