ವಿಶ್ವಕಪ್ ಪುಟ್ಬಾಲ್: ಇಂಗ್ಲೆಂಡ್ ಕನಸು ಭಗ್ನ, ಫೈನಲ್ ಗೆ ಲಗ್ಗೆ ಇಟ್ಟ ಕ್ರೋಷಿಯಾ
ಮಾಸ್ಕೋ: ಎರಡನೇ ಸೆಮಿಫೈನಲ್ ನಲ್ಲಿ ಭರ್ಜರಿ ಮ್ಯಾಜಿಕ್ ತೋರಿದ ಕ್ರೋಷಿಯಾ ತಂಡವು ಇಂಗ್ಲೆಂಡ್ ವಿರುದ್ಧ 2-1 ಅಂತರದ ಜಯ ಸಾಧಿಸುವುದರ ಮೂಲಕ ಮೊದಲ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಟಿದೆ. ಆ ಮೂಲಕ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್ ತಂಡದ ಕನಸು ಸಂಪೂರ್ಣ ಭಗ್ನಗೊಂಡಿದೆ.
ಎಕ್ಸ್ಟ್ರಾ ಟೈಮ್ ವೇಳೆಯ 109ನೇ ನಿಮಿಷದಲ್ಲಿ ಮ್ಯಾರಿಯೋ ಮಾಂಡಜುಕಿಕ್ ರ ಮ್ಯಾಜಿಕ್ ಗೋಲ್ ನಿಂದಾಗ ಮುನ್ನಡೆ ಸಾಧಿಸಿದ ಕ್ರೋಷಿಯಾ ಆ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತು. 1990 ರಿಂದ ಇದೇ ಮೊದಲಬಾರಿಗೆ ಸೆಮಿಫೈನಲ್ ಗೆ ಪ್ರವೇಶಿಸಿರುವ ಇಂಗ್ಲೆಂಡ್ 1966 ರ ನಂತರ ಫೈನಲ್ ಗೆ ಪ್ರವೇಶಿಸುವ ವಿಶ್ವಾಸದಲ್ಲಿತ್ತು ಆದರೆ ಈ ಎಲ್ಲ ಕನಸನ್ನು ಮ್ಯಾರಿಯೋ ಭಗ್ನಗೊಳಿಸಿಬಿಟ್ಟರು. ಇನ್ನೊಂದೆಡೆಗೆ ಕ್ರೋಷಿಯಾ ತಂಡವು ಕೂಡ 1998 ರ ನಂತರ ಇದೆ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು.
ಪಂದ್ಯದ ಪ್ರಾರಂಭದಲ್ಲಿ ದೊರೆತ ಫ್ರೀ ಕಿಕ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಇಂಗ್ಲೆಂಡ್ ತಂಡದ ತ್ರಿಪ್ಪಿಯರ್ ಗೋಲ್ ಖಾತೆಯನ್ನು ತೆರೆದು ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿರಿಸಿದ್ದರು. ಆದರೆ 68ನೇ ನಿಮಿಷದಲ್ಲಿ ಕ್ರೋಷಿಯಾ ತಂಡದ ಪರ ಇವಾನ್ ಪೆರಿಸಿಕ್ ಆಕರ್ಷಕ ಗೋಲು ಸಿಡಿಸಿ ಇಂಗ್ಲೆಂಡ್ ವಿರುದ್ದ 1-1 ಸಮ ಸಾಧಿಸುವಲ್ಲಿ ನೆರವಾದರು. ತದನಂತರ ಮ್ಯಾರಿಯೋ ಅವರ ಮ್ಯಾಜಿಕ್ ಗೋಲ್ ಕ್ರೋಷಿಯಾ ತಂಡವನ್ನು ವಿಶ್ವಕಪ್ ಪುಟ್ಬಾಲ್ ನ ಫೈನಲ್ ಗೆ ತಲುಪುವಂತೆ ಮಾಡಿತ್ತು.