ಬೆಂಗಳೂರು: ಫೀಬಾ(FIBA) ಏಷಿಯಾ ಯು-18 ಮಹಿಳಾ ಬ್ಯಾಸ್ಕೆಟ್‌ ಬಾಲ್ ಪಂದ್ಯಾವಳಿ ಅ. 28 ರಿಂದ ನ.3 ರವರೆಗೆ ನಗರದ ಕಂಠೀರವ ಸ್ಟೇಡಿಯಂ ಹಾಗೂ ಕೋರಮಂಗಲದಲ್ಲಿ ನಡೆಯಲಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. 


COMMERCIAL BREAK
SCROLL TO CONTINUE READING

ವಿಧಾನಾಸೌಧದಲ್ಲಿ ಅಧಿಕಾರಿಗಳೊಂದಿಗೆ ಬ್ಯಾಸ್ಕೆಟ್ ಬಾಲ್‌ ಪಂದ್ಯಾವಳಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸತತ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ಫೀಬಾ ಏಷಿಯಾ ಅಂಡರ್ 18 ಮಹಿಳಾ ಬ್ಯಾಸ್ಕೆಟ್ ಬಾಲ್‌ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದರು. 


ಆಸ್ಟ್ರೆಲಿಯಾ, ನ್ಯೂಜಿಲ್ಯಾಂಡ್, ಚೈನಾ, ಜಪಾನ್, ಮಲೇಶಿಯಾ, ಇಂಡೋನೇಶಿಯಾ ಸೇರಿದಂತೆ ಒಟ್ಟು 16 ರಾಷ್ಟ್ರದಿಂದ 16 ತಂಡಗಳ 320 ಆಟಗಾರ್ತಿಯರು ಆಗಮಿಸುತ್ತಿದ್ದಾರೆ. ಇವರಿಗೆ ಅಗತ್ಯ ಸೌಕರ್ಯ, ಸಾರಿಗೆ, ಆರೋಗ್ಯ, ವಸತಿ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. 


ಎರಡು ಕೋಟಿ ರೂ. ವೆಚ್ಚದಲ್ಲಿ ಸ್ಟೇಡಿಯಂನನ್ನು ಮೇಲ್ದರ್ಜೆಗೇರಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಸ್ಟೆಡಿಯಂ ಇದಾಗಿದೆ ಎಂದರು. ಈ ಬಾರಿ ಪಂದ್ಯಾವಳಿ ವೀಕ್ಷಿಸಲು ಪ್ರವೇಶ ಶುಲ್ಕವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಕ್ಟೋಬರ್ 27 ಕ್ಕೆ ಇದರ ಉದ್ಘಾಟನೆ ನೆರವೇರಲಿದೆ.‌