ನವದೆಹಲಿ: ಸೌತಾಂಪ್ಟನ್ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಭಾರತ ತಂಡವು 11 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ. ಕೊನೆಯ ಓವರ್ ವರೆಗೆ ಕುತೂಹಲ ಕೆರಳಿಸಿದ್ದ, ಈ ಪಂದ್ಯಕ್ಕೆ ಭಾರತ ತಂಡದ ಬೌಲರ್ ಗಳು ಗೆಲುವನ್ನು ತಂಡದ ಕಡೆ ವಾಲುವಂತೆ ಮಾಡಿದರು.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಆರಂಭಿಕ ಹಂತದಲ್ಲೇ ಆಘಾತ ಎದುರಾಗಿತ್ತು. ತಂಡದ ಮೊತ್ತ 7 ರನ್ ಗಳಾಗುವಷ್ಟರಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೊಂದೆಡೆ ಭಾರತದ ರನ್ ಗತಿಯೂ ಕೂಡ ಮಂದಗತಿಯಲ್ಲಿ ಸಾಗುತ್ತಿತ್ತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ 67 ಹಾಗೂ ಕೊನೆಯಲ್ಲಿ ಕೇದಾರ್ ಜಾದವ್ ಅವರ 52 ರನ್ ಗಳು ತಂಡದ ಮೊತ್ತವನ್ನು 200 ರ ಗಡಿ ದಾಟುವಲ್ಲಿ ನೆರವಾಯಿತು. ಕೊನೆಗೆ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳನ್ನು ಗಳಿಸಿತು.



ಇನ್ನು ಅಫ್ಘಾನಿಸ್ತಾನ ತಂಡ ಗುಲ್ಬದೀನ್ ನೈಬ್ ಮತ್ತು ರಶಿದ್ ಖಾನ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತ ತಂಡ ಬ್ಯಾಟಿಂಗ್ ಬೆನ್ನೆಲುಬು ಮುರಿದರು.


225 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ ತಂಡಕ್ಕೆ ಆರಂಭದಲ್ಲಿ ಹಜರತುಲ್ಲಾ ಜಜಾಜಿ ಅವರನ್ನು ಔಟ್ ಮಾಡುವ ಮೂಲಕ ವಿಕೆಟ್ ಖಾತೆಯನ್ನು ತೆರೆದರು. ತದನಂತರ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ತಂಡದ ನಾಯಕ ಗುಲ್ಬದೀನ್ ನೈಬ್ ಅವರ ವಿಕೆಟನ್ನು ಪಡೆದರು. ಆದರೆ ಪ್ರಮುಖ ಹಂತದಲ್ಲಿ  ಬುಮ್ರಾ ಎರಡು ವಿಕೆಟ್ಗಳನ್ನು ತೆಗೆದುಕೊಳ್ಳುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.



ಒಂದು ಹಂತದಲ್ಲಿ ಅಫ್ಘಾನಿಸ್ತಾನ ತಂಡದ ಆಟಗಾರ ಮೊಹಮ್ಮದ್ ನಬಿ ಅರ್ಧಶತಕವನ್ನು ಗಳಿಸುವ ಮೂಲಕ ಭಾರತಕ್ಕೆ ನಿಜಕ್ಕೂ ಸವಾಲಾಗಿ ಪರಿಣಮಿಸಿದ್ದರು. ಆದರೆ ಬುಮ್ರಾ ಅವರು ತಮ್ಮ ಯಾರ್ಕರ್ ಗಳಿಂದ ರನ್ ಗತಿಗೆ ಕಡಿವಾಣ ಹಾಕಿದರು. ಕೊನೆಯ ಓವರ್ ನಲ್ಲಿ ಬೌಲಿಂಗ್ ಗೆ ಇಳಿದ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಗಳನ್ನು ತೆಗೆದು ಕೊಂಡು ಭಾರತ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ವಿಶೇಷವೆಂದರೆ ಅವರು  2019 ರ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಶ್ರೇಯಕ್ಕೆ ಪಾತ್ರರಾದರು. ಭಾರತ ತಂಡದ ಈ ಹಿಂದೆ 1987 ರ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.