ಐಸಿಸಿ ಹಾಲ್ ಆಫ್ ಫೇಮ್`ಗೆ ಭಾರತದ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರ್ಪಡೆ
ರಾಹುಲ್ ದ್ರಾವಿಡ್ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಐದನೇ ಭಾರತೀಯ ಆಟಗಾರ.
ದುಬೈ: ಐಸಿಸಿ ಹಾಲ್ ಆಫ್ ಫೇಮ್ನಲ್ಲಿ ಕೆಲವು ಆಟಗಾರರನ್ನು ನೇಮಕ ಮಾಡಿದೆ. ಕ್ರಿಕೆಟ್ ಇತಿಹಾಸದಲ್ಲಿ ದೀರ್ಘಕಾಲ ಆಡುವ ಸಂದರ್ಭದಲ್ಲಿ ಪ್ರಮುಖ ಸಾಧನೆಗಳನ್ನು ಸಾಧಿಸಿದ ಆಟಗಾರರನ್ನು ಹಾಲ್ ಆಫ್ ಫೇಮ್ ಒಳಗೊಂಡಿರುತ್ತದೆ. ಭಾರತದ ಮಹಾನ್ ಗೋಡೆ ಎಂದೇ ಖ್ಯಾತಿ ಪಡೆದಿರುವ ಖ್ಯಾತ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ವಿಶ್ವದ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್'ಗೆ ಸೇರ್ಪಡೆಯಾಗಿದ್ದಾರೆ. ಆಸ್ಟ್ರೇಲಿಯಾ ಮಾಜಿ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಿವೃತ್ತ ವಿಕೆಟ್ ಕೀಪರ್ ಕ್ಲೇರ್ ಟೇಲರ್ ಅವರು ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಗೆ ಸದಸ್ಯರಾಗಿ ನೇಮಕವಾಗಿದ್ದಾರೆ.
ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ದ್ರಾವಿಡ್ ಪಾತ್ರರಾಗಿದ್ದಾರೆ. ಹಿಂದಿನ ಭಾರತದ ಮಾಜಿ ನಾಯಕರಾದ ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ಈ ಸ್ಥಾನ ಪಡೆದಿದ್ದಾರೆ.
ಭಾನುವಾರ ಡಬ್ಲಿನ್ ನಲ್ಲಿ ನಡೆದ ಸಮಾರಂಭದಲ್ಲಿ ಈ ನೇಮಕ ಮಾಡಲಾಗಿದ್ದು, ರಾಹುಲ್ ದ್ರಾವಿಡ್ ಭಾರತದಿಂದ ಆಯ್ಕೆಯಾಗುತ್ತಿರುವ ಐದನೇ ಆಟಗಾರರಾಗಿದ್ದಾರೆ. ರಿಕ್ಕಿ ಪಾಂಟಿಂಗ್ ಆಸ್ಟ್ರೇಲಿಯಾದ 25ನೇ ಹಾಗೂ ಟೇಲರ್ ಅವರು ಇಂಗ್ಲೆಂಡ್ನಿಂದ ನೇಮಕವಾದ ಮೂರನೇ ಆಟಗಾರರಾಗಿದ್ದು, ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಆಯ್ಕೆಯಾದ ಏಳನೇ ಮಹಿಳಾ ಆಟಗಾರರಾಗಿದ್ದಾರೆ.
ತಮ್ಮನ್ನು ಹಾಲ್ ಆಫ್ ಫೇಮ್ ಗೆ ನೇಮಕ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಹುಲ್ ದ್ರಾವಿಡ್, ಐಸಿಸಿಯು ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಆಯ್ಕೆ ಮಾಡಿರುವುದು ಮಹಾನ್ ಗೌರವ. ಹಲವು ಪೀಳಿಗೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಜತೆ ಹೆಸರು ಕಾಣಿಸುವುದು ಪ್ರತಿ ಆಟಗಾರನ ವೃತ್ತಿ ಜೀವನದ ಕನಸಾಗಿರುತ್ತದೆ. ಕ್ರಿಕೆಟ್ ವೃತ್ತಿ ಬದುಕನ್ನು ಕಟ್ಟಿಕೊಂಡು ಈ ರೀತಿಯ ಪರಿಗಣನೆ ದೊರಕುವುದು ಯಾವ ಆಟಗಾರನಿಗಾದರೂ ಖುಷಿ ನೀಡುತ್ತದೆ ಎಂದಿದ್ದಾರೆ.
ಐಸಿಸಿ ಹಾಲ್ ಆಫ್ ಫೇಮ್ ಆಟದ ಶ್ರೇಷ್ಠರನ್ನು ಗೌರವಿಸುವ ಪರಿಪಾಠವಾಗಿದೆ. ಕ್ರಿಕೆಟ್ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿದ ಅತ್ಯಂತ ಶ್ರೇಷ್ಠ ಆಟಗಾರರನ್ನು ಮಾತ್ರ ಈ ಗೌರವಕ್ಕೆ ಪರಿಗಣಿಸಲಾಗುತ್ತದೆ. ಹಾಲ್ ಆಫ್ ಫೇಮ್‌ನ ಕ್ರಿಕೆಟ್ ಸುಪ್ರಸಿದ್ಧರ ಪಟ್ಟಿಯಲ್ಲಿ ಸೇರ್ಪಡೆಯಾದ ಅದ್ಭುತ ಆಟಗಾರರಾದ ರಾಹುಲ್, ರಿಕ್ಕಿ ಮತ್ತು ಕ್ಲೇರ್ ಅವರನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.