ನವದೆಹಲಿ: ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮತ್ತು ಅಕ್ಷರ್ ಪಟೇಲ್ ಅಮೋಘ ಬೌಲಿಂಗ್‌ನ ನೆರವಿನಿಂದ ಟೀಂ ಇಂಡಿಯಾ 2ನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯಲ್ಲಿ 1-1ರಿಂದ ಸರಣಿ ಸಮಬಲ ಮಾಡಿಕೊಂಡಿದೆ. ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಆಗಿದ್ದ ಈ ಪಂದ್ಯ ಮಳೆ ಕಾರಣ ತಡವಾಗಿ ಪ್ರಾರಂಭವಾಯಿತು. ಬಳಿಕ ಪಂದ್ಯವನ್ನು 8 ಓವರ್‍ಗಳಿಗೆ ನಿಗದಿಪಡಿಸಿ ಆಡಿಸಲಾಯಿತು.


COMMERCIAL BREAK
SCROLL TO CONTINUE READING

ಟಾಸ್ ಗೆದ್ದ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ 8 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿ ಸವಾಲಿನ ಟಾರ್ಗೆಟ್ ನೀಡಿತು. ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ (ಅಜೇಯ 43) ಮತ್ತು ಆ್ಯರೋನ್ ಫಿಂಚ್ (31) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 91 ರನ್‍ಗಳ ಗುರಿ ಬೆನ್ನತ್ತಿದ ಭಾರತ 7.2 ಓವರ್‍ಗಳಲ್ಲಿ ಗೆಲುವಿನ ಗುರಿ ಮುಟ್ಟಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ(ಅಜೇಯ 46) ಮತ್ತು ದಿನೇಶ್ ಕಾರ್ತಿಕ್(ಅಜೇಯ 10) ಸ್ಫೋಟಕ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆಸೀಸ್ ವಿರುದ್ಧ ಪಂದ್ಯ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ತುಂಬಾ ಖುಷಿಯಿಂದ ಕಾಣಿಸಿಕೊಂಡರು. ತಂಡದ ಆಟಗಾರರನ್ನು ತೀವ್ರವಾಗಿ ಹೊಗಳಿದ ಅವರು, ‘ಇಂತಹ ಪಂದ್ಯಗಳಲ್ಲಿ ಯಾವುದೇ ತಂತ್ರಗಾರಿಕೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಉತ್ತಮವಾಗಿ ಆಡಿದರು’ ಎಂದು ಹೇಳಿದರು.


ಇದನ್ನೂ ಓದಿ: Rohit Sharma: “ಸಿಕ್ಸರ್ ಕಿಂಗ್ ರೋಹಿತ್ ಶರ್ಮಾ”: ಹಿಟ್ ಮ್ಯಾನ್ ಬತ್ತಳಿಕೆಗೆ ಸೇರಿತು ಮತ್ತೊಂದು ವಿಶ್ವದಾಖಲೆ


ರೋಹಿತ್ ಶರ್ಮಾ ಹೇಳಿದ್ದೇನು..?


ಪಂದ್ಯವನ್ನು ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ತಮ್ಮ ಇನ್ನಿಂಗ್ಸ್ ಬಗ್ಗೆ ಮಾತನಾಡಿದರು. ‘ನಾನು ಕಳೆದ 8-9 ತಿಂಗಳಿಂದ ಈ ರೀತಿ ಆಡುತ್ತಿದ್ದೇನೆ, ಆದ್ದರಿಂದ ಹೆಚ್ಚಿನ ಬದಲಾವಣೆಯಾಗಿಲ್ಲ. ಆದರೆ ಇಂತಹ ಪಂದ್ಯಗಳಲ್ಲಿ ಹೆಚ್ಚಿನ ತಂತ್ರ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ಅದೇ ರೀತಿ ಆಡಿ ನಾವು ಗೆಲುವು ಸಾಧಿಸಿದ್ದೇವೆ’ ಅಂತಾ ಖುಷಿ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ 20 ಎಸೆತಗಳಲ್ಲಿ 43 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.


ಈ ಆಟಗಾರರನ್ನು ಶ್ಲಾಘಿಸಿದ ರೋಹಿತ್  


ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ‘ನಾವು ಬೌಲಿಂಗ್ ಮಾಡುವಾಗ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದೆವು. ಇದರ ನಂತರ ಇಬ್ಬನಿ ಬೀಳಲಾರಂಭಿಸಿತು. ಈ ಪರಿಸ್ಥಿತಿಯಲ್ಲಿ ಆಡುವುದು ಎಷ್ಟು ಕಷ್ಟ ಎಂಬುದನ್ನು ಆಟಗಾರರು ಅದರಿಂದ ಕಲಿಯಬೇಕೆಂದು ನಾವು ಬಯಸುತ್ತೇವೆ. ಜಸ್ಪ್ರೀತ್ ಬುಮ್ರಾ ಪುನರಾಗಮನ ನೋಡಲು ನಮಗೆ ಸಂತೋಷವಾಗಿದೆ. ತಂಡವಾಗಿ ನಾವು ಹೆಚ್ಚು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಹೆಚ್ಚು ರನ್ ಬಿಟ್ಟುಕೊಟ್ಟರೂ ನಮ್ಮ ನಮ್ಮ ಆಟಗಾರರು ಉತ್ತಮ ಬೌಲಿಂಗ್ ಮಾಡಿದರು’ ಎಂದು ಹೇಳಿದರು.


ಅಕ್ಷರ್ ಪಟೇಲ್ ಬಗ್ಗೆ ಮೆಚ್ಚುಗೆ    


ಅಕ್ಸರ್ ಪಟೇಲ್ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ, ‘ಅಕ್ಷರ್ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡಬಹುದು. ಇದರಿಂದ ವಿವಿಧ ಸಂದರ್ಭಗಳಲ್ಲಿ ಇತರ ಬೌಲರ್‌ಗಳನ್ನು ಬಳಸುವ ಅನುಕೂಲ ದೊರೆಯುತ್ತದೆ. ಅಕ್ಸರ್ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಿದರೆ, ಮಧ್ಯಮ ಓವರ್‌ಗಳಲ್ಲಿ ವೇಗದ ಬೌಲರ್‌ಗಳನ್ನು ಬಳಸಬಹುದು. ಅಕ್ಸರ್ ಉತ್ತಮವಾಗಿ ಬೌಲಿಂಗ್ ಮಾಡಿದರು ಮತ್ತು ದಿನೇಶ್ ಕಾರ್ತಿಕ್ ಕೊನೆಯಲ್ಲಿ ಚೆನ್ನಾಗಿ ಬ್ಯಾಟಿಂಗ್ ನಡೆಸಿದರು’ ಎಂದು ತಿಳಿಸಿದರು.


ಇದನ್ನೂ ಓದಿ: ಪಾಕ್ ವಿರುದ್ಧ ಇಂಗ್ಲೆಂಡ್ ಗೆ 63 ರನ್ ಗಳ ಭರ್ಜರಿ ಗೆಲುವು


ಆ್ಯರೋನ್ ಫಿಂಚ್ ಹೇಳಿದ್ದೇನು?


ಇನಿಂಗ್ಸ್‌ನ ಅಂತ್ಯದಲ್ಲಿ ನಾವು ಉತ್ತಮವಾಗಿ ಆಡಲು ಸಾಧ್ಯವಾಯಿತು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಹೇಳಿದ್ದಾರೆ. ಅಕ್ಷರ್ ಅವರ 2 ಓವರ್‌ಗಳು ನಮಗೆ ತೊಂದರೆ ನೀಡಿದವು. ಇಲ್ಲಿದ್ದರೆ ನಾವು ಇನ್ನು ದೊಡ್ಡ ಮೊತ್ತದ ಟಾರ್ಗೆಟ್ ನೀಡುತ್ತಿದ್ದೇವು. ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು’ ಅಂತಾ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.