India vs Australia: ಮೆಲ್ಬೋರ್ನ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು
ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 137 ರನ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ.
ಮೆಲ್ಬೋರ್ನ್: ಮೆಲ್ಬೋರ್ನ್ನಲ್ಲಿ ಮುಕ್ತಾಯವಾದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 137 ರನ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ 150ನೇ ಗೆಲುವನ್ನು ದಾಖಲಿಸಿದೆ.
ಆಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 31 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಆದರೆ ಪರ್ತ್‌ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 146 ರನ್ ಅಂತರದ ಹೀನಾಯ ಸೋಲಿಗೊಳಗಾಗಿತ್ತು. ಹಾಗಾಗಿ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಎರಡೂ ತಂಡಗಳ ಪಾಲಿಗೂ ನಿರ್ಣಾಯಕವೆನಿಸಿತ್ತು. ಇದರಂತೆ ಸಾಂಘಿಕ ಹೋರಾಟ ನೀಡಿರುವ ವಿರಾಟ್ ಕೊಹ್ಲಿ ಪಡೆ ಇತಿಹಾಸ ರಚಿಸಿದೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಮಾಡಿದ್ದ ಆಸ್ಟ್ರೇಲಿಯಾ ರವಿವಾರದ ಆಟದಲ್ಲಿ ಕೇವಲ 3 ರನ್ ಸೇರಿಸಿ ಸೋಲೊಪ್ಪಿಕೊಂಡಿತು. ದಿನದಾಟದ ಆರಂಭದಲ್ಲಿ ಕಾಣಿಸಿಕೊಂಡ ಮಳೆ ಭಾರತದ ಗೆಲುವಿಗೆ ಅಡ್ಡಲಾಗಿತ್ತು. ಆದರೆ ಭೋಜನ ಸಮಯದ ನಂತರ ನಿಂತ ಮಳೆಯಿಂದಾಗಿ ಮತ್ತೆ ಆರಂಭವಾದ ಆಟದಲ್ಲಿ ಭಾರತ ಕೇವಲ 4.3 ಓವರ್ ನಲ್ಲಿ ಆಸೀಸ್ ನ ಕೊನೆಯ ಎರಡು ವಿಕೆಟ್ ಪಡೆದು ಮೆಲ್ಬೋರ್ನ್ ಅಂಗಳದಲ್ಲಿ ವಿಜಯ ಪತಾಕೆ ಹರಿಸಿತು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದ ಜಸ್ಪ್ರೀತ್ ಬುಮ್ರಾಹ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರು.
ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಪಂದ್ಯದಲ್ಲಿ 2-1ರ ಮುನ್ನಡೆ ದಾಖಲಿಸಿದೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಮಣ್ಣಿನಲ್ಲಿ ಸ್ಮರಣೀಯ ಸಾಧನೆ ಮಾಡಿದೆ.